Home News ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ

ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ

0

ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯ ಪಾತ್ರ ಪ್ರಮುಖವಾಗಿದ್ದು, ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರು ಆರೋಗ್ಯದ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ರಾಜ್ಯ ಆರ್.ಓ.ಆರ್.ಸಿ.ಎಚ್ ಡಾ.ರಾಜ್ ಕುಮಾರ್ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಶಾ ಕಾರ್ಯಕರ್ತೆಯರ ಕಾರ್ಯಚಟುವಟಿಕೆಗಳ ಕುರಿತು ಸೋಮವಾರ ತರಬೇತಿ ನೀಡಿದ ಅವರು, ಲಾರ್ವಾಗಳ ಸಮೀಕ್ಷೆ, ಸ್ವಚ್ಚತೆ, ಜನರ ಆರೋಗ್ಯ ರಕ್ಷಣೆ, ಗರ್ಭಿಣಿಯರ ಆರೈಕೆ, ಅವರಿಗೆ ನೀಡಬೇಕಾಗಿರುವ ಪೌಷ್ಠಿಕಾಂಶ ಆಹಾರ, ಬಾಣಂತಿಯರ ಆರೈಕೆ, ಸೇರಿದಂತೆ ಸ್ವಚ್ಚತೆಗೆ ಸಂಬಂಧಪಟ್ಟಂತೆ ಜನರಿಗೆ ಜಾಗೃತಿ ಮೂಡಿಸಬೇಕು.
ಗರ್ಭಿಣಿ ಮಹಿಳೆಯರಲ್ಲಿ ಉಂಟಾಗಬಹುದಾದ ರಕ್ತಹೀನತೆಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದರ ಕುರಿತು ಜಾಗೃತರಾಗಬೇಕು. ಸಮುದಾಯದ ಆರೋಗ್ಯ ರಕ್ಷಣೆಗಾಗಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಅವರಿಗೆ ತಲುಪಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವುದು ಒಂದು ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಬಿಸಾಡುವ ಕಸ, ಚರಂಡಿಗಳ ಸ್ವಚ್ಚತೆ, ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿರಿ. ಪೌಷ್ಠಿಕ ಆಹಾರ ಸೇವನೆ, ಹಸಿರು ತರಕಾರಿಗಳ ಸೇವನೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರ್ಕಾರವು ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲ್ಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದರು.
ಆಶಾ ಕಾರ್ಯಕರ್ತೆಯರ ತಾಲ್ಲೂಕು ಸಮನ್ವಯಾಧಿಕಾರಿ ಗೀತಾ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು ೧೬೨ ಮಂದಿ ಆಶಾ ಕಾರ್ಯಕರ್ತೆಯರಿದ್ದಾರೆ. ಅವರಲ್ಲಿ ೫೦ ಮಂದಿಯಂತೆ ಮೂರು ತಂಡಗಳಾಗಿ ವಿಭಾಗಿಸಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ವೈದ್ಯರುಗಳು, ನರ್ಸ್‌ಗಳು, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಾಲ್ಲೂಕಿನಲ್ಲಿನ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಆಶಾ ಕಾರ್ಯಕರ್ತೆರು ತರಬೇತಿಯಲ್ಲಿದ್ದರು.