Home News ಇರುವುದೊಂದೇ ಜನ್ಮ. ಸಾರ್ಥಕ ಬದುಕು ನಮ್ಮದಾಗಲಿ

ಇರುವುದೊಂದೇ ಜನ್ಮ. ಸಾರ್ಥಕ ಬದುಕು ನಮ್ಮದಾಗಲಿ

0

ನಮ್ಮ ಅನುಪಸ್ಥಿತಿಯಲ್ಲಿ ಜಗತ್ತು ನಮ್ಮನ್ನು ನೆನೆಯುವಂತೆ ಏನಾದರೂ ಸಾಧಿಸಿ ಹೋಗಬೇಕು. ಇರುವುದೊಂದೇ ಜನ್ಮ. ಸಾರ್ಥಕ ಬದುಕನ್ನು ಬದುಕೋಣ ಎಂದು ಸಾಹಿತಿ ಸುಂಡ್ರಹಳ್ಳಿ ಎನ್. ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ – 7 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ತಮ್ಮ ಕೃತಿಗಳಾದ ‘ಸೆಲ್ಪೀ ವಿಥ್ ವಿಕ್ಟರಿ’ ಮತ್ತು ‘ಕಡಲು ಕೂಡುವ ಹನಿಗಳು’ ಕುರಿತು ಮಾತನಾಡಿದರು.
ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕು. ಸೋಲುಗಳೇ ನಮ್ಮ ಗೆಲುವಿನ ಮೆಟ್ಟಿಲುಗಳಾಗಬೇಕು. ಗಳಿಸಿದ್ದರಲ್ಲಿ ಹಂಚಿ ತಿಂದಾಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಆತ್ಮವಿಶ್ವಾಸದಿಂದ ಸನ್ಮಾರ್ಗದಲ್ಲಿ ನಡೆದಾಗ ಯಶಸ್ಸು ನಮ್ಮದಾಗುತ್ತದೆ. ವಿವೇಕ ಮತ್ತು ವಿವೇಚನೆ ಕಳೆದುಕೊಂಡರೆ ಸರ್ವನಾಶ ಖಚಿತ ಎಂದು ಸಮಯೋಚಿತ ಕಥೆಗಳೊಂದಿಗೆ ವಿವರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ನಾನು ನಂತರ ಪಾಸು ಮಾಡಿ ಮುಂದೆ ಪಿಯುಸಿಯಲ್ಲಿ ಜಿಲ್ಲೆಗೇ ಮೊದಲಿಗನಾದೆ. ಮೊದಲ ಪುಸ್ತಕವನ್ನು ಪ್ರಕಟಿಸಲು ವಿಜಯಪುರದ ಕಸಾಪ ಮುಂದೆ ಬಂದು ಪ್ರೋತ್ಸಾಹಿಸಿದರು. ನಮ್ಮ ಶ್ರಮ, ಪ್ರಯತ್ನ ಅಚಲವಾದ ಗುರಿ ನಮಗೆ ದಾರಿ ತೋರಿಸುತ್ತದೆ. ಸೋತಾಗ ನಿರಾಶರಾಗದೇ ಪ್ರಯತ್ನ ಮುಂದುವರಿಸಿ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ‘ಅನುಭವ ಮಂಟಪ’ವನ್ನು ಸೃಷ್ಟಿಸಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ವಿಜಯಪುರದ ಇನ್ಸ್ಪೈರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಎನ್. ಶ್ರೀನಿವಾಸಮೂರ್ತಿ ಅವರು ವ್ಯಕ್ತಿತ್ವ ವಿಕಸನ ತರಭೇತಿ ತರಗತಿಗಳನ್ನು ನಡೆಸುತ್ತಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ಹಂಬು, ಮುಗುಳು, ಕಡಲು ಕೂಡುವ ಹನಿಗಳು ಎಂಬ ಕವನಸಂಕಲನಗಳನ್ನು, ನಾಗರೀಕ ಪ್ರಜ್ಞೆ, ನಡತೆಗೊಂದು ಮುನ್ನುಡಿ, ಗೆಲುವಿನ ರಹಸ್ಯ, ಸೆಲ್ಪೀ ವಿಥ್ ವಿಕ್ಟರಿ, ವಿಧಿಯ ಬೆನ್ನೇರಿ ಎಂಬ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಲೇಖಕರ ಪರಿಚಯ ಮಾಡಿಕೊಟ್ಟರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಲಕ್ಷ್ಮೀನಾರಾಯಣ್, ವಿರೂಪಾಕ್ಷಪ್ಪ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜೆ.ಸಂದೀಪ್, ಅಜಿತ್ ಕೌಂಡಿನ್ಯ, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕಿರುತೆರೆ ನಟಿ ಸುಷ್ಮಾ, ಟಿ.ಟಿ.ನರಸಿಂಹಪ್ಪ, ಎಸ್.ವಿ.ನಾಗರಾಜರಾವ್, ಕೆ.ವೀರಭದ್ರ, ವಿ.ವೆಂಕಟರಮಣ, ಮಕ್ಸೂದ್, ಚಾಂದ್ಪಾಷ, ವೈಶಾಕ್, ಮಂಜುನಾಥ್, ವೃಷಭೇಂದ್ರಪ್ಪ ಹಾಜರಿದ್ದರು.