Home News ಇ-ಬೀಡ್ ವ್ಯವಸ್ಥೆಯಲ್ಲಿನ ಗೊಂದಲ: ರೈತರ ಆಕ್ರೋಷ

ಇ-ಬೀಡ್ ವ್ಯವಸ್ಥೆಯಲ್ಲಿನ ಗೊಂದಲ: ರೈತರ ಆಕ್ರೋಷ

0

ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಚನ್ನಪಟ್ಟಣ, ರಾಮನಗರದ ಮಾದರಿಯಲ್ಲಿ ಇ-–ಬೀಡ್ ವ್ಯವಸ್ಥೆಯನ್ನು ಬುಧವಾರದಂದು ಅಧಿಕೃತವಾಗಿ ಚಾಲನೆ ನೀಡಿದ್ದರಾದರೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಮತ್ತು ಮಾರುಕಟ್ಟೆಗೆ ಗೂಡು ಹೆಚ್ಚಾಗಿ ಆವಕವಾದ ಕಾರಣ ಗುರುವಾರ ಮಾರುಕಟ್ಟೆಯಲ್ಲಿ ಗೊಂದಲ ಏರ್ಪಟ್ಟಿತ್ತು. ರೇಷ್ಮೆ ಗೂಡನ್ನು ಹಾಕಲು ಜಾಲರಿ ಸಿಗದೇ ಓಡಾಡುವ ದಾರಿಯಲ್ಲೆಲ್ಲಾ ಕೆಲ ರೈತರು ಹಾಕಬೇಕಾದ ಪರಿಸ್ಥಿತಿ ಏರ್ಪಟ್ಟಿದ್ದು, ರೈತರ ಆಕ್ರೋಷಕ್ಕೆ ಕಾರಣವಾಗಿತ್ತು.
ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.
ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಧರದ ಬಗ್ಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ.
ಈ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಗುರುವಾರ ನೆರೆಯ ಆಂದ್ರ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆಗಳಿಂದ ಬರುವಂತಹ ಗೂಡುಗಳಿಗೆ ಮೊದಲೇ ಜಾಲರಿಗಳನ್ನು ನಿಗದಿಪಡಿಸಿರುವುದರಿಂದ ಮಾರುಕಟ್ಟೆಯ ಎಲ್ಲಾ ಜಾಲರಿಗಳಲ್ಲಿ ಅವರೇ ಗೂಡನ್ನು ತುಂಬಿಸಿಕೊಂಡಿದ್ದಾರೆ, ಸ್ಥಳೀಯ ರೈತರು ಬೆಳಗ್ಗೆ ೭ ಗಂಟೆಗೆ ಬಂದರೂ ಕೂಡಾ ಜಾಲರಿಗಳು ಸಿಗದೆ ಗೂಡನ್ನು ಹೊರಗೆ ಹಾಕುವಂತಾಯಿತು.
ನಮಗೆ ಟೋಕನ್ಗಳನ್ನೂ ಕೊಡುತ್ತಿಲ್ಲ, ಜಾಲರಿಗಳೂ ಇಲ್ಲ, ಮಾರುಕಟ್ಟೆಯ ಅಧಿಕಾರಿಗಳು ಮೊದಲೇ ಸ್ಥಳೀಯ ರೈತರುಗಳಿಗೆ ಮಾಹಿತಿಗಳನ್ನು ನೀಡದೆ, ಈ ವ್ಯವಸ್ಥೆಯನ್ನು ಮಾಡಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ, ಕೌಂಟರಿನಲ್ಲಿ ಟೋಕನ್ ತೆಗೆದುಕೊಂಡು ಹೋಗಿ ಜಾಲರಿಗಳಲ್ಲಿ ಹಾಕಿರುವವರ ಗೂಡಿಗೆ ಒಳ್ಳೆಯ ಬೆಲೆ ಬರುತ್ತದೆ, ಹೊರಗೆ ಹಾಕಿರುವ ಗೂಡಿಗೆ ತೀರಾ ಕಡಿಮೆ ಬೆಲೆ ಸಿಗುತ್ತದೆ, ಬಿಸಿಲಿನಲ್ಲಿ ಗೂಡೆಲ್ಲವೂ ಮೆತ್ತಗಾಗುತ್ತಿದೆ ಕಳೆದ ಒಂದು ತಿಂಗಳಿನಿಂದ ಕಷ್ಟಪಟ್ಟು ಬೆಳೆದಿರುವ ಗೂಡು ನಷ್ಟವಾಗಿದ್ದು ನಮಗೆ ನಷ್ಟಪರಿಹಾರವನ್ನು ಕೊಡಬೇಕು ಮುಂದಿನ ಹದಿನೈದು ದಿನಗಳ ಕಾಲ ಯಥಾಸ್ಥಿತಿ ಮುಂದುವರೆಸಿ ರೈತರಿಗೆ ಇ – ಬೀಡ್ನ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವೇ ಇ – ಬೀಡ್ ಪದ್ಧತಿಯನ್ನು ಅಳವಡಿಸಲಿ ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ, ‘ಕಳೆದ ವಾರದಲ್ಲಿ ಎರಡು ಬಾರಿ ರೈತರು, ರೀಲರುಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಆಯುಕ್ತರೂ ಕೂಡಾ ಬಂದು ರೈತರಿಗೆ, ರೀಲರುಗಳಿಗೆ ಇ – ಬೀಡ್ ಪದ್ದತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ, ಬುಧವಾರದಿಂದ ಪದ್ದತಿಯನ್ನು ಜಾರಿಗೆ ತಂದಿದ್ದು, ಕಳೆದ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೫ ಘಂಟೆಯವರೆಗೆ ಕಂಪ್ಯೂಟರ್ಗಳ ಮುಖಾಂತರ ಗೂಡಿನ ಮೂಟೆಗಳಿಗೆ ಟೋಕನ್ ನೀಡಿ, ಬಿನ್ಗಳನ್ನು ನೀಡಲಾಗಿದೆ, ಸ್ಥಳೀಯರು ಇಂದು ಬೆಳಿಗ್ಗೆ ಬಂದಿರುವುದರಿಂದ ಬಿನ್ಗಳು ಸಿಕ್ಕಿಲ್ಲ. ಗೂಡು ಕೂಡಾ ಹೆಚ್ಚಾಗಿ ಬಂದಿದೆ. ಪ್ರಾಯೋಗಿಕವಾಗಿ ಸ್ವಲ್ಪ ಅಡಚಣೆ ಉಂಟಾಗಿದ್ದು ಸಮಸ್ಯೆ ಬಗೆಹರಿಯಲಿದೆ’ ಎಂದರು.
ಪ್ರಾಂತ ರೈತ ಸಂಘದ ತಾಲ್ಲೂಕು ಅದ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ, ಸೇರಿದಂತೆ ವಿವಿಧ ರೈತರು ಮುಖಂಡರು ಹಾಜರಿದ್ದರು.