ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೋಮವಾರ ಯೂನಿಟಿ ಸಿಲ್ ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಆರನೇ ವರ್ಷದ ಬೃಹತ್ ರಕ್ತದಾನ ಶಿಬಿರದಲ್ಲಿ ಯೂನಿಟಿ ಸಿಲ್ ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್ ಮಾತನಾಡಿದರು.
“ಹಿಂಸೆಯ ಬದಲಿಗೆ ಒಂದಾದರೂ ಜೀವವನ್ನು ಉಳಿಸಿದಲ್ಲಿ ಅದು ಮನುಕುಲದ ಬಹುದೊಡ್ಡ ಸೇವೆ” ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಮೆದುಳು ಸೇರಿದಂತೆ ಹೃದಯ, ಹಾಗೂ ದೇಹದ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಸಾರ್ವಜನಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ರಕ್ತ ಪೂರೈಸಲು ಸಾಧ್ಯವಾಗುತ್ತದೆ ಎಂದರು.
ಕಳೆದ ಆರು ವರ್ಷಗಳಿಂದ ಮಹಮ್ಮದ್ ಪೈಗಂಬರ್ ನೆನಪಿನಲ್ಲಿ ಯೂನಿಟಿ ಸಿಲ್ ಸಿಲಾ ಫೌಂಡೇಷನ್‌ನ ಯುವಕರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ಒಟ್ಟು ೧೫೦ ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ಯೂನಿಟಿ ಸಿಲ್ಸಿಲಾ ಫೌಂಡೇಶನ್ ಪದಾಧಿಕಾರಿಗಳಾದ ಇಮ್ತಿಯಾಜ್ ಪಾಷ, ಅಕ್ರಂಪಾಷ, ರೆಹಮತ್, ಆಫೀಜ್, ಮುಜಾಹಿದ್, ಫಾರುಕ್, ಶಬ್ಬೀರ್, ವಸೀಮ್, ಮುದಾಸಿರ್, ಜಭಿ, ತೌಸಿಫ್, ಡಾ.ಹೇಮಂತ್, ರೆಡ್ ಕ್ರಾಸ್ ಸಂಸ್ಥೆಯ ಭರತ್, ಕೃಷ್ಣವೇಣಿ ಹಾಜರಿದ್ದರು.