Home News ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ

ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ

0

ಈಗಿನ ಫಾಸ್ಟ್ ಫುಡ್ ಯುಗದಲ್ಲಿ ತಾಯಂದಿರೇ ಅಡುಗೆ ಮಾಡಿಕೊಂಡು ಬಂದು ತಮ್ಮ ಮಕ್ಕಳಿಗಲ್ಲದೆ ಇತರ ಮಕ್ಕಳಿಗೂ ಉಣ ಬಡಿಸುವ ಕಾರ್ಯಕ್ರಮದ ಮೂಲಕ ಮಾತೃಭೋಜನವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹಿರಿಯ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್‌ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾತೃಭೋಜನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಭುವಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ ಎಂದು ಕರೆಯುತ್ತದೆ. ಯಾವುದೇ ಭಾಷೆಯಲ್ಲೂ ಅಮ್ಮ ಎಂಬುದು ಅತ್ಯಂತ ಮಧುರವಾದ ಶಬ್ದ. ಪುಟ್ಟ ಕಂದನ ಮೊದಲ ತೊದಲು ನುಡಿಯೂ ಅಮ್ಮ. ಅಮ್ಮ ಎಂಬ ಎರಡಕ್ಷರದ ಪದದಲ್ಲಿ ಅದೇನು ಚೈತನ್ಯ, ದೇವರು ದಯಾಮಯ. ಕರುಣಾಮಯಿ. ತಾಯಿಯೂ ಕರುಣಾಮಯಿ. ತ್ಯಾಗಮಯಿ. ದಯಾಮಯಿ. ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ ಎಂದು ಹೇಳಿದರು.

ಶಿಡ್ಲಘಟ್ಟದ ಹೊರವಲಯದ ಹನುಮಂತಪುರ ಗೇಟ್‌ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ತಾಯಂದಿರು ಶಾಲಾ ಮಕ್ಕಳಿಗೆ ಉಣಬಡಿಸಿದರು.
ಶಿಡ್ಲಘಟ್ಟದ ಹೊರವಲಯದ ಹನುಮಂತಪುರ ಗೇಟ್‌ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ತಾಯಂದಿರು ಶಾಲಾ ಮಕ್ಕಳಿಗೆ ಉಣಬಡಿಸಿದರು.

ತಾಯಿ ಮಮಕಾರದ ಸಾಕಾರ ಮೂರ್ತಿ. ತಾಯಿಯ ಹೃದಯ ಬಹು ಮೃದು, ತಾಯಿಯ ಅಡುಗೆ ಬಲು ರುಚಿ. ಏಕೆಂದರೆ ಅದರಲ್ಲಿ ಪ್ರೀತಿ ಬೆರೆತಿರುತ್ತದೆ. ಅದಕ್ಕಾಗಿಯೇ ಇಲ್ಲಿ ತಾಯಂದಿರು ಎಲ್ಲ ಮಕ್ಕಳಿಗೂ ಸಮಾನವಾಗಿ ಪ್ರೀತಿಯಿಂದ ಉಣಬಡಿಸಿರುತ್ತಾರೆ. ಇಷ್ಟೊಂದು ಪ್ರೀತಿಯಿಂದ ತುಂಬಿರುವ ಸ್ಥಳಕ್ಕೆ ಆಗಮಿಸಿ ನಾನೂ ಬೊಗಸೆಯಷ್ಟು ಪ್ರೀತಿಯನ್ನು ತುಂಬಿಕೊಂಡು ಹೋಗುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ನುಡಿದು, ಮಮಕಾರಕ್ಕೆ ಸಂಬಂಧಿಸಿದ ಭಾವಗೀತೆಗಳನ್ನು ಹಾಡಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನ ನೀಡಬೇಕು. ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ ಹಾಗಾಗಿ ಮನೆಯಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗು ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್, ಕೆಂಪರೆಡ್ಡಿ, ಜೆ.ಎಸ್‌.ವೆಂಕಟಸ್ವಾಮಿ, ಪುರುಷೋತ್ತಮ್, ಮುರಳಿ, ದೇವರಾಜ್ ಮತ್ತಿತರರು ಹಾಜರಿದ್ದರು.