Home News ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ನಗರ ಸೇರಿದಂತೆ ನಗರಕ್ಕೆ ಹೊಂದಿಕೊಂಡತಿರುವ ಗ್ರಾಮೀಣ ಭಾಗದ ಬಡ ಜನರು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಲಾಗದು ಎಂಬ ಕಾರಣಕ್ಕೆ ಬೃಹತ್ ಆರೋಗ್ಯ ಹಾಗು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ಗಾಂಧಿ ಜಯಂತಿ ಹಾಗು ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಹಳಷ್ಟು ವಯೋವೃದ್ಧರೂ ಸೇರಿದಂತೆ ಆರ್ಥಿಕವಾಘಿ ಹಿಂದುಳಿದವರು ದೂರದ ಒಳ್ಳೆಯ ಆಸ್ಪತ್ರೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಬಡವರಿಗೆ ಉತ್ತಮ ಚಿಕಿತ್ಸೆ ಪಡೆಯಲಾಗುವುದಿಲ್ಲ. ಈ ಲೋಪವನ್ನು ಸರಿಪಡಿಸಲು ಎಂ.ವಿ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಇಲ್ಲಿಗೇ ಬಂದಿದ್ದಾರೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ಸಾಂದ್ರತೆ ಮತ್ತು ಕೀಲು ರೋಗ ತಪಾಸಣೆ, ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಜ್ಞರು, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸುವರು. ಶಿಭಿರದಲ್ಲಿ ಉಚಿತವಾಗಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳನ್ನು ತೊಲಗಿಸುವುದರೊಂದಿಗೆ ಆರೋಗ್ಯವಂತ ನಾಗರೀಕರೆಲ್ಲರೂ ರಕ್ತದಾನ ಮಾಡುವುದರಿಂದ ಅಪಘಾತವಾಗಿ ರಕ್ತದ ಕೊರತೆಯಿಂದ ಮೃತ ಹೊಂದುತ್ತಿರುವ ಜನರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ ಎಂದರು. ರಕ್ತದಾನದಿಂದ ಯಾವುದೇ ಅನಾಹುತಗಳಾಗುವುದಿಲ್ಲ ಬದಲಿಗೆ ರಕ್ತದಾನ ಮಾಡಿದವರಲ್ಲಿ ನೂತನ ರಕ್ತ ಉತ್ಪತ್ತಿಯಾಗುತ್ತದೆ ಹಾಗಾಗಿ ಯುವಜನತೆ ಕನಿಷ್ಟ ವರ್ಷಕ್ಕೆ ಎರಡು ಭಾರಿಯಾದರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಶಿಬಿರದಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದ ರೋಗಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶ್ರವಣ ತೊಂದರೆಯಿರುವ ವೃದ್ಧರಿಗೆ ಶ್ರವಣಯಂತ್ರಗಳನ್ನು ವಿತರಿಸಲಾಯಿತು.
ಎಸ್ ಎನ್ ಕ್ರಿಯಾ ಟ್ರಸ್ಟ್ನ ದೇವರಾಜ್, ವೈದ್ಯ ಡಾ.ಸತ್ಯನಾರಾಯಣರಾವ್, ಮುಖಂಡರಾದ ಅಶ್ವತ್ಥನಾರಾಯಣರೆಡ್ಡಿ, ನರಸಿಂಹಪ್ಪ, ವಿಶ್ವನಾಥ್, ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.