ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ರಿವಾರ್ಡ್ಸ್ ಸಾಮಾಜಿಕ ಸೇವಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹರಿಪ್ರಸಾದ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ಅಂಗನವಾಡಿ ಕೇಂದ್ರದಲ್ಲಿ ಕೊಳಚೆ ಸುಧಾರಣೆ ಯೋಜನೆಯಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯ ಸ್ಥಿತಿಗತಿಯಿಂದ ವಂಚಿತರಾದ ಜನರಿಗೆ ಅನುಕೂಲವಾಗಲೆಂದು ತಜ್ಞ ವೈದ್ಯರ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆಯ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರಿಗೆ ರಿವಾರ್ಡ್ಸ್ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಉಚಿತವಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಸ್ವಸ್ಥ, ಸಮಾನ, ಆರೋಗ್ಯಕರ ಸಮಾಜ ನಮ್ಮದಾಗಬೇಕು. ಬಡವರಿಗೂ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ವಿವಿಧ ತಜ್ಷ ವೈದ್ಯರು ಆಗಮಿಸಿ ರೋಗಿಗಳನ್ನು ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಉಚಿತವಾಗಿ ಔಷಧಿ ವಿತರಿಸಲಾಯಿತು ಹಾಗೂ ಮೂತ್ರ, ರಕ್ತ, ಇಸಿಜಿ, ಬಿಪಿ ಮತ್ತು ಹೃದಯ ಪರೀಕ್ಷೆಯನ್ನು ನಡೆಸಲಾಯಿತು.
ಡಾ.ಸುನಿಲ್, ಡಾ.ಸ್ವಾತಿ, ಡಾ.ಕಿರಣ್, ಡಾ.ಆರ್ಯ, ಡಾ.ರಮ್ಯಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಷ್ಣು, ರಿವಾರ್ಡ್ಸ್ ಸಂಸ್ಥೆಯ ಆಂಜಪ್ಪ, ಸುನೀತಾ, ಸಾವಿತ್ರಿ, ದೀಪಾ ಹಾಜರಿದ್ದರು.
- Advertisement -
- Advertisement -
- Advertisement -