ನಗರದ ನೆಹರೂ ಕ್ರೀಡಾಂಗಣದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಉಚಿತ ಬೇಸಿಗೆ ಕ್ರೀಡಾ ಶಿಬಿರ ಮತ್ತು ತಾಲ್ಲೂಕುಮಟ್ಟದ ಕ್ರೀಡಾಕೂಟ ಮುಕ್ತಾಯವಾಯಿತು.
ತಾಲ್ಲೂಕಿನ ಮಕ್ಕಳು ಕ್ರೀಡೆಯಲ್ಲಿ ಅಪಾರ ಪ್ರತಿಭಾವಂತರು. ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಉಚಿತ ಕ್ರೀಡಾ ತರಬೇತಿಯನ್ನು ಆಯೋಜಿಸುತ್ತೇವೆ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ತಿಳಿಸಿದರು.
ಹದಿನೈದು ದಿನಗಳ ಕಾಲ ನಡೆಸಿದ ಉಚಿತ ಬೇಸಿಗೆ ಶಿಬಿರಕ್ಕೆ, ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು, ವಿವಿಧ ಕ್ರೀಡಾಪಟುಗಳು ನಮ್ಮ ಪ್ರಯತ್ನ ಕಂಡು ಮಕ್ಕಳಿಗೆ ಗ್ಲೂಕೋಸ್, ಹಣ್ಣಿನ ರಸ, ಬಿಸ್ಕತ್, ಮೊಟ್ಟೆ ಮುಂತಾದವುಗಳನ್ನು ನೀಡಿ ಸಹಕರಿಸಿದ್ದಾರೆ. ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಪದಕ, ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ಹಾಗೂ ನೀರಿನ ಬಾಟಲ್ ನೀಡಲಾಯಿತು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವ ಸಲಹೆಗಾರ ಸುರೇಶ್, ಅಧ್ಯಕ್ಷ ಲಕ್ಷ್ಮೀಪತಿ, ಉಪಾಧ್ಯಕ್ಷ ಶಿವಲಿಂಗ, ರಾಜಶೇಖರ್, ಪುರುಷೋತ್ತಮ್, ಶ್ರೀರಾಮ್, ಮುರಳಿ, ಮಂಜುಳಮ್ಮ, ಎಸ್.ಪದ್ಮನಾಭಪ್ರಭು, ನಾಗರಾಜ್, ಕೆ.ಮುನಿರಾಜು, ಆನಂದ್, ನಾಗೇಶ್, ರಾಧಾಕೃಷ್ಣ, ರಹಮತ್ತುಲ್ಲ, ನರಸಿಂಹಮೂರ್ತಿ, ಭಗವಾನ್‌ಸಿಂಗ್, ಶ್ರೀನಿವಾಸಮೂರ್ತಿ, ಯಾಸ್ಮೀನ್, ಭಾಸ್ಕರ್, ಅನಿತಾ, ಲಲಿತಾ, ಗೌರಮ್ಮ, ಭಾಗ್ಯಮ್ಮ ಹಾಜರಿದ್ದರು.