Home News ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಆದ್ಯತೆ ನೀಡಿ

ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಆದ್ಯತೆ ನೀಡಿ

0

ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಯಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜನೆ ಮಾಡಲಾಗಿದ್ದ ೨೦೧೫–-೧೬ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆರ್ಥಿಕವಾಗಿ ಸಬಲರಾಗಲು ಹಾಗೂ ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಹೈನೋದ್ಯಮವನ್ನು ಉಳಿಸಿ ಬೆಳೆಸಬೇಕಾದಂತಹ ಅನಿವಾರ್ಯತೆಯ ನಡುವೆ ತೀವ್ರ ಬರಗಾಲದಲ್ಲಿಯೂ ಉತ್ತಮ ಇಳುವರಿಯ ಹಾಲನ್ನು ಉತ್ಪಾದನೆ ಮಾಡುವ ಹೊಣೆಗಾರಿಕೆ ರೈತರದ್ದಾಗಿದೆ. ೧೦ ಲಕ್ಷ ೨೫ ಸಾವಿರ ಲೀಟರ್ನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು, ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಒಕ್ಕೂಟವು ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಿದೆ. ಉತ್ಪಾದಕರು ಕಲಬೆರಕೆ ಹಾಲನ್ನು ಪೂರೈಕೆ ಮಾಡುವುದರಿಂದ ಸಹಕಾರ ಸಂಘ ದಿವಾಳಿಯಾಗುವುದರ ಜೊತೆಗೆ ಉತ್ಪಾದಕರಿಗೆ ಸಿಗಬೇಕಾದಂತಹ ಪ್ರೋತ್ಸಾಹಧನ ಕಡಿತಗೊಳ್ಳಲಿದೆ. ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರಿಂದ ಉತ್ತಮ ಮಾರುಕಟ್ಟೆಯ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸಲು ಸಹಕಾರಿಯಾಗಲಿದೆ.
ಒಕ್ಕೂಟದಿಂದ ೨ ಲಕ್ಷ ರೂಪಾಯಿಗಳನ್ನು ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತದೆ. ಈ ಅನುದಾನವನ್ನು ಸದುಪಯೋಗಪಡಿಸಿಕೊಂಡು ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲು ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಸಹಕಾರ ಸಂಘದ ಅಧ್ಯಕ್ಷ ಎಸ್.ಮುನಿಆಂಜಿನಪ್ಪ ಮಾತನಾಡಿ, ಸಂಘದಲ್ಲಿ ೬ ಲಕ್ಷ ರೂಪಾಯಿಗಳ ಹಣವನ್ನು ಉಳಿಸಲಾಗಿದ್ದು ಒಕ್ಕೂಟದಿಂದ ಆರ್ಥಿಕ ನೆರವು ಪಡೆದು ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹಾಲು ಉತ್ಪಾದಕರು ನಿಗದಿತ ಸಮಯದಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳಬೇಕು. ಸಹಕಾರ ಸಂಘದ ಮೂಲಕ ಸಿಗುವಂತಹ ಸೌಲಭ್ಯಗಳಾದ ಯಶಸ್ವಿನಿ ಯೋಜನೆಯು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಉತ್ಪಾದಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ರಾಸುಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಯ ಮೂಲಕ ನೀಡುವಂತಹ ಅನುದಾನಗಳಲ್ಲಿ ರಾಸುಗಳ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಎಂ.ಅಮರೇಶ್, ಗ್ರಾಮ ಪಂಚಾಯತಿ ಸದಸ್ಯ ಹರೀಶ್, ಸಹಕಾರ ಸಂಘದ ನಿರ್ದೇಶಕರಾದ ಎಂ.ಬಿ.ನರಸಿಂಹಮೂರ್ತಿ, ಎಂ.ದೇವರಾಜ್, ಪಿ.ರಾಮರೆಡ್ಡಿ, ನಂಜಪ್ಪ, ದೇವಮ್ಮ, ರೇವಣ್ಣಸಿದ್ದಯ್ಯ, ಭಾಗ್ಯಮ್ಮ, ಮುನಿಮರಿಯಪ್ಪ, ಮಹೇಶ, ಎಂ.ನಾರಾಯಣಪ್ಪ, ಸಿಬ್ಬಂದಿ ಎನ್.ಸುಭ್ರಮಣ್ಯಪ್ಪ, ಎಂ.ಬಿ.ಆಂಜಿನಪ್ಪ, ಎಂ.ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.