Home News ಉಪಯೋಗವಾಗದಿರುವ ಸಂತೆ ಮಳಿಗೆಗಳು

ಉಪಯೋಗವಾಗದಿರುವ ಸಂತೆ ಮಳಿಗೆಗಳು

0

ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಸರ್ಕಾರದ ಲಕ್ಷಾಂತರ ಅನುದಾನದ ಹಣದಲ್ಲಿ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ಗ್ರಾಮೀಣ ಸಂತೆ ಮಳಿಗೆಗಳು ಉಪಯೋಗವಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ತಾಲ್ಲೂಕಿನ ಜಂಗಮಕೋಟೆ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಈ ಗ್ರಾಮದಲ್ಲಿ ವಾರದ ಸಂತೆಯು ಈ ಹಿಂದೆ ಪ್ರತಿ ಗುರುವಾರ ನಡೆಯುತ್ತಿತ್ತು. ಕಳೆದ ಕೆಲವು ವರ್ಷದಿಂದ ಪ್ರತಿ ಶನಿವಾರ ಸಂತೆ ನಡೆಯುತ್ತಿದ್ದು ಈ ಸಂತೆಯು ಜಂಗಮಕೋಟೆ ಮತ್ತು ಶಿಡ್ಲಘಟ್ಟದ ಮುಖ್ಯ ರಸ್ತೆಯಲ್ಲಿ ನಡೆಯುತ್ತಿದ್ದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು.
ಆದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಚಿಕ್ಕಬಳ್ಳಾಪುರ ಆರ್.ಡಿ. ಎಪ್. ೧೩ ರ ಯೋಜನೆ ಅಡಿಯಲ್ಲಿ ೨೦೧೦ ರಲ್ಲಿ ಗ್ರಾಮೀಣ ಸಂತೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಜಂಗಮಕೋಟೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮೀಣ ಸಂತೆ ಮಳಿಗೆಗಳನ್ನು ನಿರ್ಮಿಸಲಾಯಿತು. ಈ ಮಳಿಗೆಗಳನ್ನು ಆಗಿನ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಉದ್ಘಾಟನೆ ಮಾಡಿದ್ದರು.
ಆದರೆ ಈ ಮಳಿಗೆಗಳು ಇಲ್ಲಿಯವರೆಗೂ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಪುಂಡ ಪೋಕರಿಗಳಿಗೆ ಜೂಜಾಟ ಮತ್ತು ಮದ್ಯಪಾನದ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ.
ಗ್ರಾಮೀಣ ಜನರು ತಾವು ಬೆಳೆದ ಬೆಳೆಗಳನ್ನು ವಾರದ ಸಂತೆಗೆ ತಂದು ಮಾರಾಟ ಮಾಡಲು ಅನುಕೂಲವಾಗಲೆಂದು ನಿರ್ಮಿಸಿರುವ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷದಿಂದ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಮಳಿಗೆಳನ್ನು ಸಂತೆಗೆ ಉಪಯೋಗವಾಗುವ ರೀತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.