Home News ಎನ್ ಪಿ ಎಸ್ ನೌಕರರ ‘ಫ್ರೀಡಂ ಪಾರ್ಕ್ ಚಲೋ’

ಎನ್ ಪಿ ಎಸ್ ನೌಕರರ ‘ಫ್ರೀಡಂ ಪಾರ್ಕ್ ಚಲೋ’

0

ಎನ್ ಪಿ ಎಸ್ ನೌಕರರ ಬೇಡಿಕೆಗಳು ನ್ಯಾಯಬದ್ಧವಾಗಿವೆ. ಅವರ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿಯಿಂದ ಫ್ರೀಡಂ ಪಾರ್ಕ್ ಹೋರಾಟಕ್ಕೆ ಟೀ ಶರ್ಟ್, ಗಾಂಧಿ ಟೋಪಿ ಮತ್ತು ಸಂಘದ ಬಾವುಟವನ್ನು ಹಿಡಿದು ಹೊರಟ ತಾಲ್ಲೂಕಿನ ಸರ್ಕಾರಿ ನೌಕರರಿಗೆ ಶುಭ ಕೋರಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಿವೃತ್ತಿಯ ನಂತರ ಭದ್ರತೆ ಅವಶ್ಯಕ. ಜಿಪಿಎಫ್ ಸೌಲಭ್ಯವಿಲ್ಲ. ಕುಟುಂಬ ಪಿಂಚಣಿ, ಮರಣ ಹಾಗೂ ನಿವೃತ್ತಿ ಉಪದಾನವಿಲ್ಲ. ತುಟ್ಟಿಭತ್ಯೆ ಇಲ್ಲ, ಕನಿಷ್ಠ ಬರವಸೆಯೂ ಇಲ್ಲ. ಇದನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಕ್ಕೆ ಸರ್ಕಾರ ಸ್ಪಂದನೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಸರ್ಕಾರಿ ನೌಕರರು ‘ಎನ್ಪಿಎಸ್ ರದ್ದಾಗಲಿ, ನಿಶ್ಚಿತ ಪಿಂಚಣಿ ಜಾರಿಯಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಬಸ್ಗಳಲ್ಲಿ ನೂರಾರು ಮಂದಿಸರ್ಕಾರಿ ನೌಕರರು ಬೆಂಗಳೂರಿನಲ್ಲಿ ನಡೆಸುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತೆರಳಿದರು.
ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎನ್.ಗಜೇಂದ್ರ, ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ಶಿವಶಂಕರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಕರಾದ ಗೋವಿಂದರಾಜುಲು, ಷರ್ಬುದ್ದೀನ್ ಹಾಜರಿದ್ದರು.