Home News ಎನ್.ಪಿ.ಎಸ್.ನೌಕರರ ಸಂಘದಿಂದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಕಾರ್ಯಕ್ರಮ

ಎನ್.ಪಿ.ಎಸ್.ನೌಕರರ ಸಂಘದಿಂದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಕಾರ್ಯಕ್ರಮ

0

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ವತಿಯಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ಬುಧವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಎನ್‌ಪಿಎಸ್‌ ನೌಕರರ ಹೋರಾಟ ನ್ಯಾಯಯುತವಾಗಿದೆ. ನಿಮಗೆ ಆಗಿರುವ ಅನ್ಯಾಯದ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇನೆ. ನಿಮಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಅವರು ತಿಳಿಸಿದರು.
‘ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ವತಿಯಿಂದ ಕೆಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅವರಿಗೆ ಆಗಿರುವ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಅವರಿಗೆ ನ್ಯಾಯ ಕೊಡಿಸುವುದಾಗಿ ಹಿಂದೆ ಹೇಳಿದ್ದರು. ಇತರ ಶಾಸಕರೊಂದಿಗೆ ನಾನೂ ಅವರ ಕಷ್ಟದ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇನೆ. ರಕ್ತದಾನ ಮಾಡುವ ಮೂಲಕ ಪ್ರತಿಭಟಿಸುವ ಆಲೋಚನೆ ಮೆಚ್ಚುವಂತಹದು’ ಎಂದು ನುಡಿದರು.
ರಕ್ತದಾನ ಶಿಬಿರಕ್ಕೆ ಮೊಟ್ಟ ಮೊದಲು ರಕ್ತದಾನ ಮಾಡುವ ಮೂಲಕ ಸಿವಿಲ್‌ ನ್ಯಾಯಾಧೀಶರಾದ ಟಿ.ಎಲ್‌.ಸಂದೀಶ್‌ ಚಾಲನೆ ನೀಡಿ, ‘ನಿಮ್ಮ ಹೋರಾಟಕ್ಕೆ ಜಯ ಸಿಗಲಿ’ ಎಂದು ಹಾರೈಸಿದರು.
ಎನ್‌ಪಿಎಸ್‌ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ಮಾತನಾಡಿ, ನಮ್ಮ ಹಲವು ವರ್ಷಗಳ ಕಾಲದ ಹೋರಾಟದ ಹಿನ್ನೆಲೆಯಲ್ಲಿ ನೌಕರರಿಗೆ ಡಿ.ಸಿ.ಆರ್.ಜಿ. ಮತ್ತು ಕುಟುಂಬ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಗೊಂದಲಮಯವಾಗಿದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಯಿಂದ ೧೨ ವರ್ಷಗಳಿಂದ ದುಡಿದು, ನಿವೃತ್ತಿಯಾಗಿರುವ, ಮೃತಪಟ್ಟಿರುವ ನೌಕರರ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಭದ್ರತೆಯಿಲ್ಲದಂತಾಗಿದೆ. ಆದ್ದರಿಂದ ಏಪ್ರಿಲ್‌ 1, ೨೦೦೬ ರಿಂದ ಪೂರ್ವಾನ್ವಯವಾಗುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅನುಕೂಲವಾಗಲಿದೆ.
ಈ ಉದ್ದೇಶದಿಂದಾಗಿ ನಮಗೆ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಸರ್ಕಾರ ಹಿಂದೆ ಮಾತು ಕೊಟ್ಟಿದ್ದಂತೆ ಜಾರಿಗೆ ತರಬೇಕು. ಅದಕ್ಕಾಗಿ ರಕ್ತ ಕೊಟ್ಟು ನ್ಯಾಯ ಕೇಳುತ್ತಿದ್ದೇವೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್‌, ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಡಾ. ಅನಿಲ್ ಕುಮಾರ್, ಡಾ. ವಿಜಯ್ ಕುಮಾರ್, ಡಾ. ವಾಣಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಗುರುರಾಜ್‌ರಾವ್, ಎನ್.ಪಿ.ಎಸ್ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಎ.ಎಂ.ವೀಣಾ, ಟಿ.ಟಿ.ನರಸಿಂಹಪ್ಪ, ಜೆ.ಎ.ತನ್ವೀರ್‌ ಅಹಮದ್‌, ಎಸ್. ಶಿವಶಂಕರ್, ಸೈಯದ್ ಶರ್ಫುದ್ದೀನ್, ಕಾತ್ಯಾಯಿನಿ ಹಾಜರಿದ್ದರು.

error: Content is protected !!