‘ನಾವು ಬಂದಿರುವುದು ರಾಜಾಸ್ಥಾನದಿಂದ ಪಾಕಿಸ್ತಾನದಿಂದಲ್ಲ. ನಿಮ್ಮ ಊರಿನ ಹೆಂಗಸರು ಮತ್ತು ಮಕ್ಕಳನ್ನು ಬೀದಿಯಲ್ಲಿ ಉಳಿಯಲು ಬಿಡುತ್ತೀರಾ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ಏನಾದರೂ ತೊಂದರೆಯಾದರೆ ಯಾರು ಹೊಣೆ. ನಾವೇನು ಕಳ್ಳತನ ಮಾಡಲು ಬಂದಿಲ್ಲವಲ್ಲ’ ಎಂದು ರಾಧಾಬಾಯಿ ಒಂದೇ ಸಮನೆ ಪ್ರಶ್ನಿಸುತ್ತಿದ್ದರೆ ಅವರ ಪೂರ್ವಾಪರ ತಿಳಿಯಲು ಬಂದಿದ್ದ ಸಾರ್ವಜನಿಕರು ನುರುತ್ತರರಾದರು.
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ರಸ್ತೆ ಬಂದಿಯಲ್ಲಿ ಸುಮಾರು 50 ಮಂದಿ ರಾಜಾಸ್ತಾನಿ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಬೀಡು ಬಿಟ್ಟಿದ್ದರು. ಹಾದಿಯಲ್ಲಿ ಸಾಗುತ್ತಿರುವ ಸಾರ್ವಜನಿಕರಿಗೆ ಇಷ್ಟೊಂದು ಜನ ಹೇಗೆ ಇಲ್ಲಿಗೆ ಬಂದರೆಂಬ ಕುತೂಹಲ. ಅವರೊಂದಿಗೆ ಗಂಡಸರೇ ಇಲ್ಲವಲ್ಲ ಎಂಬ ಅಚ್ಚರಿ ಕೂಡ.
‘ನಾವು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಬಂದಿದ್ದೇವೆ. ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತೇವೆ. ನಾವು ಕಸೂತಿ ಕೆಲಸ ಮಾಡುತ್ತೇವೆ’ ಎನ್ನುತ್ತಾ ಅವರು ಕಸೂತಿ ಮಾಡಿದ ಬಟ್ಟೆಯನ್ನು ಪ್ರದರ್ಶಿಸಿದರು.
ನಿನ್ನೆಯ ದಿನವಷ್ಟೇ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಲವಾರು ಮಂದಿ ರಾಜಸ್ಥಾನಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಭಿಕ್ಷೆ ಬೇಡುತ್ತಿದ್ದುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿ ಅವರನ್ನು ಸಾಗಹಾಕಿದ ಘಟನೆ ಹಚ್ಚಹಸಿರಾಗಿರುವಾಗಲೇ ಶಿಡ್ಲಘಟ್ಟದಲ್ಲಿ ರಾಜಸ್ತಾನಿ ಮಹಿಳೆಯರು ಮತ್ತು ಮಕ್ಕಳು ಕಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಇವರ ಬಗ್ಗೆ ಕುತೂಹಲ ಉಂಟಾಗಿತ್ತು. ಇವರು ಮೈಸೂರಿಗೆ ಹೋಗಲು ಈ ಮಾರ್ಗವಾಗಿ ಹೇಗೆ ಬಂದರು. ಇವರೊಂದಿಗೆ ಒಬ್ಬರೂ ಗಂಡಸರೇಕೆ ಬಂದಿಲ್ಲ. ಇವರ ಜೀವನ ನಿರ್ವಹಣೆ ಹೇಗೆ ಎಂಬುದಾಗಿ ಪ್ರಶ್ನೆ ಮೂಡಿತ್ತು.
ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ, ‘ಚಿಂತಾಮಣಿಯಿಂದ ಈ ಮಹಿಳೆಯರು ಮತ್ತು ಮಕ್ಕಳ ಗುಂಪು ಟಿಕೇಟ್ ಪಡೆಯದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆ ಅಧಿಕಾರಿ ಟಿಕೇಟ್ ಕೇಳಿದಾಗ ರೈಲ್ವೆ ನಿಲ್ದಾಣದಿಂದ ಹೊರಕ್ಕೆ ಅವರು ದೌಡಾಯಿಸಿದ್ದಾರೆ. ಆಗ ರೈಲ್ವೆ ಅಧಿಕಾರಿ ನಮಗೆ ತಿಳಿಸಿದರು. ಹೋಗಿ ನೋಡುವಷ್ಟರಲ್ಲಿ ಅವರು ಅಲ್ಲಿರಲಿಲ್ಲ. ಸಾರ್ವಜನಿಕರು ಕಳಿಸಿದ ಬಸ್ಸಿನಲ್ಲೂ ಟಿಕೇಟ್ ಪಡೆಯದಿದ್ದಲ್ಲಿ ಬಸ್ಸಿನವರು ನಡುದಾರಿಯಲ್ಲಿಯೇ ಇಳಿಸಿಬಿಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಉತ್ತರ ನೀಡುವ ಇವರು ಏತಕ್ಕಾಗಿ ಬಂದಿರುವರೋ ತಿಳಿಯದು’ ಎಂದು ತಿಳಿಸಿದರು.