ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೇವು ಬ್ಯಾಂಕ್ ತೆರೆದು ರಾಸುಗಳ ಮೇವಿನ ಕೊರತೆ ನೀಗಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆವಾರು ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಬೀಕರ ಬರಗಾಲ ಬಂದಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೇವಿನ ಬ್ಯಾಂಕ್‌ಗಳನ್ನು ಆರಂಭಿಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದು ಅಗತ್ಯ ಕ್ರಮಗಳ ಬಗ್ಗೆ ಕೂಡಲೆ ವರದಿ ನೀಡಿ ಶೀಘ್ರವಾಗಿ ಮೇವಿನ ಬ್ಯಾಂಕ್‌ನ್ನು ಆರಂಭಿಸುವಂತೆ ಸೂಚಿಸಿದರು.
ತಾಲ್ಲೂಕಿನಲ್ಲಿ ದನಕರುಗಳ ಸಂಖ್ಯೆ, ಬೇಕಾಗಬಹುದಾದ ಮೇವಿನ ಪ್ರಮಾಣದ ಬಗ್ಗೆ ವಿವರ ನೀಡಿದ ಪಶು ಸಂಗೊಪನೆ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ, ಬಳ್ಳಾರಿಯಿಂದ ಮೇವನ್ನು ಆಮದು ಮಾಡಿಕೊಳ್ಳಬೇಕಿದೆ. ಈಗಾಗಲೆ ತಾಲ್ಲೂಕಿಗೆ ೪,೧೦೬ ಮೇವಿನ ಕಿಟ್‌ಗಳನ್ನು ಸರಬರಾಜು ಮಾಡಲು ಕೋರಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ವಾಸುದೇವಮೂರ್ತಿ ಮಾತನಾಡಿ, ತಾಲ್ಲೂಕಿನ ದಿಬ್ಬೂರಹಳ್ಳಿ ಹಾಗೂ ಸಾದಲಿ ಪ್ರದೇಶದಲ್ಲಿ ಮೇವು ಬ್ಯಾಂಕ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ದಾಸ್ತಾನು ಮಾಡುವ ಮೇವಿಗೆ ಭದ್ರತೆ ಕಲ್ಪಿಸುವ ದೃಷ್ಠಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮೇವಿನ ದಾಸ್ತಾನು ಮಾಡಲು ಸ್ಥಳದ ಕೊರತೆ ಜತೆಗೆ ಭದ್ರತೆಯ ಸಮಸ್ಯೆಯೂ ಎದುರಾಗುವ ಕಾರಣ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಒಟ್ಟು ೧೭,೧೬೩ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು ಈ ಪೈಕಿ ೧೬,೪೩೪ ಹೆಕ್ಟೇರ್‌ನಲ್ಲಷ್ಟೆ ಬಿತ್ತನೆಯಾಗಿದ್ದು ಮಳೆ ಕೊರತೆಯಿಂದಾಗಿ ೧೩,೫೨೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ, ಸರ್ಕಾರದಿಂದ ಅನುಮೋದನೆ ದೊರತೆ ಕೂಡಲೆ ನಷ್ಟ ಪರಿಹಾರವನ್ನು ವಿತರಿಸಲಾಗುವುದು ಎಂದು ಸಭೆಗೆ ವಿವರಿಸಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಎಇಇ ಕೇಶವಮೂರ್ತಿ ಮಾತನಾಡಿ, ನಾರಾಯಣದಾಸರಹಳ್ಳಿಯಲ್ಲಿ ಖಾಸಗಿ ಕೊಳವೆಬಾವಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ವೈ.ಹುಣಸೇನಹಳ್ಳಿ, ಬಸವನಪರ್ತಿ ಹಾಗೂ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ೨೭೮ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ ೧೩೧ ಕೊಳವೆ ಬಾವಿಗಳಿಗೆ ಮಾತ್ರ ಹಣ ಪಾವತಿ ಮಾಡಿದ್ದು ೧೨೯ ಕೊಳವೆ ಬಾವಿಗಳಿಗೆ ಪಾವತಿಸಬೇಕಿದೆ, ಕೆಲವು ಕಡೆ ಕೊಳವೆ ಬಾವಿಗಳು ಕೊರೆದು ನೀರು ದೊರೆತಿದ್ದರೂ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ ಎಂದು ಸಮಸ್ಯೆಯನ್ನು ತೆರೆದಿಟ್ಟರು.
೧೪೪ ಗ್ರಾಮಗಳಲ್ಲಿ ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಅಂದಾಜಿಸಿದ್ದು ಅಂತಹ ಗ್ರಾಮಗಳಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ವಾಸುದೇವಮೂರ್ತಿ ಮಾತನಾಡಿ, ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನ ಒದಗಿಸುವ ಸಲುವಾಗಿ ಈಗಾಗಲೇ ೯೩ ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು ೬೦ ಎಕರೆಗೆ ಸಂಬಂದಿಸಿದಂತೆ ಕಡತವನ್ನು ಸಿದ್ದಪಡಿಸಲಾಗಿದೆ.
ಇನ್ನುಳಿದ ಜಮೀನಿಗೆ ಸಂಬಂದಿಸಿದಂತೆ ಅಗತ್ಯ ದಾಖಲೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು ಗ್ರಾಮ ಪಂಚಾಯಿತಿವಾರು ನಿವೇಶನರಹಿತರ ಪಟ್ಟಿಯನ್ನು ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ. ಜತೆಗೆ ಸಾರ್ವಜನಿಕರಿಗೆ ಮೀಸಲಾದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ದೂರು ಸಲ್ಲಿಸಿದರೆ ಭೂಮಾಪಕರೊಂದಿಗೆ ತ್ವರಿತವಾಗಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೆಶಕ ಚಂದ್ರಪ್ಪ ಸೇರಿದಂತೆ ವಿವಿದ ಇಲಾಖೆಗಳ ಅಕಾರಿಗಳು ಸಭೆಗೆ ಪ್ರಗತಿಯ ಮಾಹಿತಿಯನ್ನು ನೀಡಿದು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನರಸಿಂಹಯ್ಯ, ಕೆಡಿಪಿ ಸಮಿತಿ ಸದಸ್ಯ ಪಿ.ವಿ.ನಾಗರಾಜ್, ತಾ.ಪಂ.ಇಓ ವೆಂಕಟೇಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.