Home News ಎಸ್‌ಎಸ್‌ಎಸ್‌ ಘಟಕದಿಂದ ‘ಸ್ವಚ್ಛತಾ ಹೈ ಸೇವಾ’ ಕಾರ್ಯಕ್ರಮ

ಎಸ್‌ಎಸ್‌ಎಸ್‌ ಘಟಕದಿಂದ ‘ಸ್ವಚ್ಛತಾ ಹೈ ಸೇವಾ’ ಕಾರ್ಯಕ್ರಮ

0

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಡಾ.ವಿಜಯ್‌ ಮಾತನಾಡಿದರು.
ಪ್ಲಾಸ್ಟಿಕ್ ಪರಿಸರದ ಮಹಾಶತ್ರು. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ದುಷ್ಪರಿಣಾಮಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಒಂದು ಪ್ಲಾಸ್ಟಿಕ್‌ ಚೀಲದ ವಿಭಜನೆಯಾಗಲು ೧೦೦ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಆ ಪ್ಲಾಸ್ಟಿಕ್‌ನ ವಿಭಜನೆಯಾಗಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಘಟಕ ಹೊರಬೀಳುತ್ತವೆ. ಆದುದರಿಂದ ಆ ಭಾಗದಲ್ಲಿ ಭೂಮಿ ಬಂಜರು ಆಗುವ ಪ್ರಕ್ರಿಯೆಯು ಆರಂಭಗೊಳ್ಳುತ್ತದೆ. ಪ್ಲಾಸ್ಟಿಕ್‌ನ ಚೀಲಗಳು ಜಲಾಶಯದಲ್ಲಿ ಸೇರಿಕೊಳ್ಳುತ್ತವೆ. ಈ ಪ್ಲಾಸ್ಟಿಕ್‌ಯುಕ್ತ ನೀರನ್ನು ಹೊಲ ಗದ್ದೆಗಳ ನೀರಾವರಿಗೆ ಉಪಯೋಗಿಸಿದ್ದಲ್ಲಿ ಆ ಭೂಮಿಯ ಧಾರಣೆ ಕ್ಷಮತೆಯ ಮೇಲೆ, ಹಾಗೆಯೇ ಉತ್ಪನ್ನದ ಮೇಲೆಯೂ ಪರಿಣಾಮವಾಗುತ್ತದೆ. ಪ್ಲಾಸ್ಟಿಕ್‌ ಬಳಕೆ ಮಾಡಸಿರಲು ನಾವೆಲ್ಲಾ ದೃಢ ನಿರ್ಧಾರ ಕೈಗೊಳ್ಳೋಣ ಎಂದರು.
ಎನ್‌ಎಸ್‌ಎಸ್‌ ಕಾರ್ಯಕ್ರಮದ ಅಧಿಕಾರಿ ಎಚ್‌.ಸಿ.ಮುನಿರಾಜು ಮಾತನಾಡಿ, ಮಹಾತ್ಮನ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಸ್ವಚ್ಛತೆಗಾಗಿ ಸ್ವಚ್ಛತಾ ಹಿ ಸೇವಾ ಚಳವಳಿಯನ್ನೇ ಆಯೋಜಿಸಿದ್ದಾರೆ. ನಾವೆಲ್ಲಾ ನಮ್ಮ ಮನೆ, ಕಚೇರಿ, ಗಲ್ಲಿ, ಊರಿನ ಸ್ವಚ್ಛತೆ ಮಾಡಿಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು. ಕಾಲೇಜಿನ ಎಸ್‌ಎಸ್‌ಎಸ್‌ ಘಟಕದ ಮೂಲಕ ಜನರಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಛತಾ ಕಾರ್ಯ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಎನ್‌. ಆನಂದ್‌ ಮಾತನಾಡಿ, ದೊಡ್ಡದಾದ ನಮ್ಮ ದೇಶದಲ್ಲಿ ಪ್ರತೀ ಸ್ಥಳದಲ್ಲೂ ಸ್ವಚ್ಛತೆ ಕಾಯ್ದುಕೊಳ್ಳಬೇಕಾದರೆ ಜನರ ಸಹಭಾಗಿತ್ವ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸುತ್ತಿದ್ದು, ಬದಲಾವಣೆಯ ನೋಟ ಕಾಣುತ್ತಿದೆ. ಆದರೂ, ಕ್ರಮಿಸಬೇಕಾದ ಹಾದಿಯೂ ಸಾಕಷ್ಟಿದೆ. ಸ್ವಚ್ಛತೆ ಎಂಬುದು ಕೇವಲ ಆಚರಣೆ ಅಥವಾ ಕಾಟಾಚಾರವಾಗಬಾರದು, ಅದು ಸ್ವಭಾವವಾಗಿ ಬದಲಾದಾಗ ದೇಶದ ಚಿತ್ರಣವನ್ನೇ ಬದಲಾಯಿಸಬಹುದು. ನಮ್ಮ ಊರಿನಿಂದ ನಾವು ಈ ಕೆಲಸವನ್ನು ಪ್ರಾರಂಭಿಸೋಣ ಎಂದು ನುಡಿದರು.
ಕಾಲೇಜು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಯಲ್ಲಿ ಸ್ವಚ್ಛತೆ ಕುರಿತಂತೆ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು.
ಉಪನ್ಯಾಸಕರಾದ ಶಿವಾರೆಡ್ಡಿ, ದೀಪಕ್‌, ಡಿ.ಲಕ್ಷ್ಮಯ್ಯ, ವೆಂಕಟಶಿವಾರೆಡ್ಡಿ, ಶ್ರೀನಿವಾಸಾಚಾರಿ, ಮಂಗಳಗೌರಿ ಹಾಜರಿದ್ದರು.

error: Content is protected !!