ತಾಲ್ಲೂಕಿನ ತಿಪ್ಪೇನಹಳ್ಳಿ ಮತ್ತು ಹಿತ್ತಲಹಳ್ಳಿಯ ಪ್ರಗತಿಪರ ಕೃಷಿಕರ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ನೀರಿನ ಸದ್ಭಳಕೆ, ಸಾವಯವ ಪದ್ಧತಿ, ಸಿರಿಧಾನ್ಯಗಳನ್ನು ಬೆಳೆಯುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ರಸಗೊಬ್ಬರದ ಬಳಕೆ ಕಡಿಮೆ ಮಾಡುವುದು, ಮಣ್ಣಿನ ಫಲವತ್ತತೆಗೆ ಕ್ರಮ ಕೈಗೊಳ್ಳುವ ಮೂಲಕ ವೆಚ್ಚ ಕಡಿಮೆ ಮಾಡಿಕೊಂಡು ರೈತರು ಲಾಭ ಮಾಡಿಕೊಳ್ಳಬೇಕು. ಮಧ್ಯವರ್ತಿಗಳ ಕಾಟವಿಲ್ಲದೇ ಮಾರುಕಟ್ಟೆಯ ವ್ಯವಸ್ಥೆ ಆದರೆ ರೈತರಿಗೆ ಅನುಕೂಲವಾಗುವುದರಿಂದ ಅದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದೆಂದರು.
ತಿಪ್ಪೇನಹಳ್ಳಿ ಗ್ರಾಮದ ರೈತ ವಿಜಯಕುಮಾರ್ ಅಳವಡಿಸಿಕೊಂಡಿರುವ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನರೇಗಾ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಬೆಳೆದಿರುವ ರೇಷ್ಮೆ (ಹಿಪ್ಪುನೇರಳೆ) ಬೆಳೆಯ ಬಗ್ಗೆ ಮಾಹಿತಿ ಪಡೆದರು. ರೈತ ವಿಜಯಕುಮಾರ್ ಅವರು, ತಾವು ತಯಾರಿಸುವ ನಾಟಿ ಗೊಬ್ಬರ ಹಾಗೂ ಎರೆಹುಳುಗೊಬ್ಬರದ ವಿಧಾನಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದರು.
ಹಿತ್ತಲಹಳ್ಳಿಯ ಕೃಷಿ ಪಂಡಿತ ಎಚ್.ಜಿ.ಗೋಪಾಲಗೌಡ ಅವರ ಸಮಗ್ರ ಕೃಷಿ ಪದ್ಧತಿ ಹಾಗೂ ಮಿಶ್ರಬೆಳೆ ತೋಟವನ್ನು ವೀಕ್ಷಿಸಿದರು. ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ಮೀನುಸಾಕಣೆ, ರೇಷ್ಮೆ ಕೃಷಿ ಹಾಗೂ ಜಮೀನಿನ ಸುತ್ತಲೂ ಸಿಲ್ವರ್ ಮರ, ೨೪ ಅಡಿಗೊಂದರಂತೆ ಮಾವು, ಆರು ಅಡಿ ಅಂತರದಲ್ಲಿ ಹಿಪ್ಪುನೇರಳೆ, ಅದರ ನಡುವೆ ತರಕಾರಿ ಬೆಳೆಗಳು, ಕೃಷಿ ಹೊಂಡ, ಅದರ ಸುತ್ತಲೂ ಮಾವು, ಗೋಡಂಬಿ, ನಿಂಬೆ, ಹಲಸು, ಪಪ್ಪಾಯ, ಬಾಳೆ, ನೆಲ್ಲಿ, ಸೀಬೆ, ಸಪೋಟ, ದಾಳಿಂಬೆ, ಕಿತ್ತಳೆ, ಚಕ್ಕೆ ಗಿಡ, ಗೆಣಸು ಮುಂತಾದವುಗಳನ್ನು ಬೆಳೆದಿದ್ದು, ಎಲ್ಲರೂ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಈ ಭಾಗದ ರೈತನಿಗೆ ಲಾಭದಾಯಕವಾಗಲಿದೆ ಎಂಬುದನ್ನು ರೈತ ಹೆಚ್.ಜಿ.ಗೋಪಾಲಗೌಡ ವಿವರಿಸಿದರು.
ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕಿ ಅನುರಾಧ, ಕೃಷಿ ಉಪ ನಿರ್ದೇಶಕಿ ಪಂಕಜ, ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್, ರೇಷ್ಮೆ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಸಾವಯವ ಕೃಷಿಕ ಪರಿವಾರದ ಬೂದಾಳ ರಾಮಾಂಜಿ, ಅಧಿಕಾರಿಗಳಾದ ಮಾಲತೇಶ್, ಅಶ್ವತ್ಥನಾರಾಯಣ ಹಾಜರಿದ್ದರು.