Home News ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0

ನಿವೃತ್ತ ಶಿಕ್ಷಕ ಎಸ್.ವಿ.ನಾಗರಾಜರಾವ್ ಸಮ್ಮೇಳನಾಧ್ಯಕ್ಷತೆಯಲ್ಲಿ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಫೆಬ್ರುವರಿ ೧೭ ರ ಶನಿವಾರ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಶುರುವಾಗಲಿದೆ.
ರಾಷ್ಟ್ರಧ್ವಜವನ್ನು ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ನಾಡಧ್ವಜವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಆರೋಹಣ ಮಾಡಲಿದ್ದಾರೆ.
ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಿಗ್ಗೆ ೯.೩೦ ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ ೧೧ ಗಂಟೆಗೆ ವಾಸವಿ ಕಲ್ಯಾಣ ಮಂಟಪದಲ್ಲಿ ‘ಸರ್.ಎಂ.ವಿಶ್ವೇಶ್ವರಯ್ಯ ವೇದಿಕೆ’ಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ರಾಜಣ್ಣ ವಹಿಸಲಿದ್ದು ಸಮ್ಮೇಳನದ ಉದ್ಘಾಟನೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ನೆರವೇರಿಸಲಿದ್ದಾರೆ.
ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ನೆರವೇರಿಸುವರು.
ಮಧ್ಯಾಹ್ನ ೨ ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಕೆ.ರಾಮಯ್ಯ ವಹಿಸಲಿದ್ದಾರೆ.
ಮಧ್ಯಾಹ್ನ ೩ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಹಿರಿಯ ಸಾಹಿತಿ ಕಾಗತಿ ವೆಂಕಟರತ್ನಂ ಅಧ್ಯಕ್ಷತೆಯನ್ನು ವಹಿಸುವರು. ಸುಮಾರು ೧೫ ಮಂದಿ ಕವಿಗಳು ವಿವಿಧ ಕವನಗಳನ್ನು ವಾಚಿಸುವರು.
ಸಂಜೆ ೪.೩೦ ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಅಧ್ಯಕ್ಷತೆಯನ್ನು ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ ವಹಿಸುವರು.
ಸಮಾರೋಪ ಸಮಾರಂಭವನ್ನು ಸಂಜೆ ೫.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಸಂಜೆ ೬.೩೦ ಗಂಟೆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶ್ರೀ ಕೃಷ್ಣ ಕಲಾಕುಂಜ ಹಾಗು ಮಯೂರಿ ನಾಟ್ಯ ಕಲಾಕೇಂದ್ರದ ಮಕ್ಕಳಿಂದ ಭರತನಾಟ್ಯ ಹಾಗು ಚಿಂತಾಮಣಿಯ ನಾಗನಾಥೇಶ್ವರಿ ಸಂಗೀತ ಪಾಠಶಾಲೆಯ ಹಿರಣ್ಯಪಲ್ಲಿ ಅಶೋಕ್ ತಂಡದವರಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ.
ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್: ಶಿಡ್ಲಘಟ್ಟದಲ್ಲಿ ಎಂ.ಎಸ್.ವೆಂಕಣ್ಣ ಹಾಗೂ ಲಕ್ಮಮ್ಮ ಪುತ್ರನಾಗಿ ೧೯೫೪ ರ ಜೂನ್ ೩ ರಂದು ಜನನ. ನಗರದ ಉಲ್ಲೂರುಪೇಟೆ ಹಾಗು ಕೋಟೆ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಇವರು, ಪ್ರೌಢಶಾಲೆಯನ್ನು ನಗರದ ವಿರುಪಾಕ್ಷಪ್ಪ ಸರ್ಕಾರಿ ಪ್ರೌಡಶಾಲೆಯಲ್ಲಿ, ಪಿಯುಸಿ ಚಿಕ್ಕಬಳ್ಳಾಪುರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ, ಬಿ.ಎ ಪದವಿಯವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಬಿ,ಎಡ್ ನ್ನು ರೀಜನಲ್ ಕಾಲೇಜು ಮೈಸೂರಿನಲ್ಲಿ ಮುಗಿಸಿ ೧೯೭೬ ರಲ್ಲಿ ಶಿಕ್ಷಕರಾಗಿ ಸೇವೆ ಆರಂಬಿಸಿ ಕೋಳ್ಳೇಗಾಲ ಸೇರಿದಂತೆ ತಾಲ್ಲೂಕಿನ ದೇವರಮಳ್ಳೂರು, ನಗರದ ಉಲ್ಲೂರುಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜೂನಿಯರ್ ಕಾಲೇಜಿನಲ್ಲಿ ಸುಮಾರು ೨೮ ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ೫ ವರ್ಷಗಳ ಕಾಲ ಅಕ್ಷರದಾಸೋಹದ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಶೈಕ್ಷಣಿಕ ಸೇವೆಗೆ ಸಂದ ಗೌರವ: ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ೨೦೦೦ ಇಸವಿಯಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೩ ರಲ್ಲಿ ಏರ್ ಇಂಡಿಯಾ ಹಾಗೂ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಜೊತೆಗೆ ಇದರ ಮೂಲಕ ಸಿಂಗಪೂರ್ಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗುವ ಸದವಕಾಶ, ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳು, ಸನ್ಮಾನಗಳು ಸಂದಿವೆ.
ಕಲೆ ಹಾಗು ಸಂಘ ಸಂಸ್ಥೆಗಳೊಂದಿಗೆ ಒಡನಾಟ: ಜೇಸಿಸ್ ನಲ್ಲಿ ಮಾಜಿ ಅಧ್ಯಕ್ಷರಾಗಿ, ಹವ್ಯಾಸಿ ಕಲಾ ವೃಂದದ ಅಧ್ಯಕ್ಷ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ, ತಾಲ್ಲೂಕು ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ತಾಲ್ಲೂಕಿನ ವಿವಿಧ ಶಾಲಾ ಮಕ್ಕಳಿಗೆ ನಾಟಕ ನಿರ್ದೇಶಕರಾಗಿ, ಮೋಡ ಸರಿಯಿತು, ತ್ರಿಮೂರ್ತಿ, ಕೈಗಾರಿಕೆ ಸಂಚಿಕೆ ಯಂತಹ ದೂರದರ್ಶನ ದಾರಾವಾಹಿ ಸೇರಿದಂತೆ ಬಿಳಿ ಗುಲಾಬಿ, ತಿಮ್ಮರಾಯ, ಬದ್ರಿ ಹಾಗೂ ಬಿಡುಗಡೆಗೆ ಸಿದ್ದಗೊಂಡಿರುವ ಮಿಸ್ಟರ್ ಎಲ್.ಎಲ್.ಬಿ ಯಂತಹ ಚಲನಚಿತ್ರದಲ್ಲಿ ಅತಿಥಿ ನಟರಾಗಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಹಾಸ್ಯ ಘಟನೆಗಳ ಬಗ್ಗೆ ಘಟನಾಮೃತ ಎಂಬ ಪುಸ್ತಕ ರಚಿಸಿ ಬಿಡುಗಡೆ ಮಾಡಿದ್ದಾರೆ.

error: Content is protected !!