ನಮ್ಮ ದೇಶವು ಪೋಲಿಯೋ ಕಾಯಿಲೆಯಿಂದ ಮುಕ್ತವಾದರೂ ನೆರೆಯ ಕೆಲವು ರಾಷ್ಟ್ರಗಳಲ್ಲಿ ಇನ್ನೂ ಈ ಕಾಯಿಲೆ ಇದೆ. ಹಾಗಾಗಿ ಪೋಲಿಯೋ ಲಸಿಕೆ ಕಾರ್ಯಕ್ರಮ ಮುಂದುವರೆದಿದ್ದು, ಎಲ್ಲಾ ಪೋಷಕರೂ ಮಕ್ಕಳನ್ನು ಕರೆತಂದು ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು ಎಂದು ಶಾಸಕ ಎಂ.ರಾಜಣ್ಣ ಮನವಿ ಮಾಡಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ 2017ನೇ ಸಾಲಿನ ಒಂದನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಅವರು ಮಾತನಾಡಿದರು.
5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಈ ಹಿಂದೆ ಎಷ್ಟು ಬಾರಿ ಲಸಿಕೆ ಹಾಕಿಸಿದ್ದರೂ, ಈ ಬಾರಿಯೂ ಮತ್ತೆ ಪೋಲಿಯೋ ಹನಿ ಹಾಕಿಸಿ. ವಿಶ್ವಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ದಕ್ಷಿಣ ರಾಜ್ಯಗಳ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಸಾಧನೆಗೆ ಪ್ರಶಂಸನಾ ಪತ್ರವೂ ಸಿಕ್ಕಿದೆ. ಆದರೆ, ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿರುವುದರಿಂದ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆಸ್ಪತ್ರೆಗಳು ಮುಂತಾದೆಡೆ ತಾಲ್ಲೂಕಿನಾದ್ಯಂತ ಲಸಿಕೆ ಕೇಂದ್ರಗಳು ಇರಲಿವೆ. ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನು ತಪ್ಪಿಸಬಾರದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಡಾ.ಸುನೀತಾ, ಡಾ.ತಿಮ್ಮೇಗೌಡ, ಆಸ್ಪತ್ರೆಯ ಅಭಿವೃದ್ಧಿ ಮತ್ತು ಸಲಹಾ ಸಮಿತಿಯ ಸದಸ್ಯ ಶ್ರೀನಿವಾಸ್, ವಿಜಯಾ ಮತ್ತಿತರರು ಹಾಜರಿದ್ದರು.