Home News ಒಂದು ವರ್ಷದಲ್ಲಿ 37 ಕೋಟಿ ರೂ ವಹಿವಾಟು ಮಾಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು

ಒಂದು ವರ್ಷದಲ್ಲಿ 37 ಕೋಟಿ ರೂ ವಹಿವಾಟು ಮಾಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಚಿಸಲಾಗಿರುವ ಸ್ವಸಹಾಯ ಸಂಘಗಳು ಬಡವರ ದುರ್ಬಲರ ಪ್ರಮುಖ ಸಂಘಟನೆ. ತಮ್ಮ ಸಂಘಟನಾ ಶಕ್ತಿಯಿಂದ ಬಡಕುಟುಂಬಗಳು ಸಬಲೀಕೃತರಾಗಬೇಕೆಂಬ ಆಶಯದಿಂದ ಮೂರೂವರೆ ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಾರಂಭಿಸಲಾಯಿತು. ಕಳೆದ ಒಂದು ವರ್ಷದಲ್ಲಿ 37 ಕೋಟಿ ರೂ ವಹಿವಾಟು ಸಂಘಗಳಿಂದ ನಡೆದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ವಸಂತ್‌ ತಿಳಿಸಿದರು.
ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬುಧವಾರ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆರು ವಲಯಗಳನ್ನು ಮಾಡಿದ್ದುಒಟ್ಟು 2051 ಸಂಘಗಳಿಂದ 19,883 ಸದಸ್ಯರನ್ನು ಒಳಗೊಂಡಿದೆ. 618 ಮಂದಿಗೆ ಕೃಷಿ ಚಟುವಟಿಕೆ, 514 ಮಂದಿಗೆ ಸ್ವದ್ಯೋಗ, 17,500 ಶೌಚಾಲಯಗಳು, 467 ಸೌರವಿದ್ಯುತ್‌ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಸಿಕ ಶಿಷ್ಯವೇತನವನ್ನು ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಗುತ್ತಿದೆ. ತಾಲ್ಲೂಕಿನ 82 ಮಂದಿಗೆ ಮಾಸಿಕ ಮಾಸಾಶನವಾಗಿ 59 ಸಾವಿರಿ ರೂಗಳನ್ನು ನೀಡಲಾಗುತ್ತಿದೆ. ಈಗಾಗಲೇ 4500 ಮಂದಿಗೆ ಬ್ಯಾಂಕ್‌ ಖಾತೆ ಮಾಡಿಸಿದ್ದು ನಗದು ರಹಿತ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸದಸ್ಯರು ರೂಢಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ನಿರ್ದೇಶಕ ಮೋಹನ್‌ ಮಾತನಾಡಿ, ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಕೆರೆಯ ಹೂಳೆತ್ತುವ ಕಾರ್ಯಕ್ರಮ, ಮದ್ಯವರ್ಜನಾ ಶಿಬಿರ, ದೇವಸ್ಥಾನಗಳಿಗೆ, ಹಾಲು ಉತ್ಪಾದಕ ಸಂಘಗಳಿಗೆ ಅನುದಾನಗಳನ್ನು ನೀಡಿದೆ. ಕೆಲವು ಕಾಲೋನಿಗಳಲ್ಲಿ ಸ್ವಚ್ಛತಾ ಶಿಬಿರಗಳ ಮೂಲಕ ಆರೋಗ್ಯದ ಅರಿವು ಮೂಡಿಸಲಾಗಿದೆ. ಸರಳ ಬಡ್ಡಿಯನ್ನು ಪಡೆದು ನಂತರ ಲಾಭಾಂಶವನ್ನು ಸಂಘಗಳಿಗೆ ವಿತರಿಸಲಾಗಿದೆ. ತಾಲ್ಲೂಕಿನ 1,238 ಸಂಘಗಳಿಗೆ 28,33,556 ರೂ ಲಾಭಾಂಶ ಸಿಕ್ಕಿದೆ. ಔಐಯಕ್ತಿಕ ಉಳಿತಾಯ, ಬ್ಯಾಂಕ್‌ಗಳಿಂದ ಪ್ರಗತಿನಿಧಿ, ಆರ್ಥಿಕ ಸೇರ್ಪಡೆ ಮತ್ತು ಸ್ವಉದ್ಯೋಗಿಗಳಿಗಾಗಿ ಅಗತ್ಯವಿರುವ ತರಬೇತಿ ಇವೇ ಮುಂತಾದ ಪ್ರಕ್ರಿಯೆಗಳಿಂದ ಸಂಘದ ಸದಸ್ಯರಲ್ಲಿ ಅಭಿವೃದ್ಧಿಯ ಕನಸುಗಳನ್ನು ಮೂಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಪ್ರಶಾಂತ್‌, ಜನಾರ್ಧನ್‌, ರಮೇಶ್‌, ಲಕ್ಷ್ಮೀ, ಮಮತ, ಗೋಪಿನಾಥ್‌ ಹಾಜರಿದ್ದರು.