ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬ್ಯಾಂಕುಗಳ ಮೇಲೆ ವಿಶ್ವಾಸವಿಟ್ಟು ಗಿರವಿ ಇಟ್ಟ ಒಡವೆಯನ್ನು ಗ್ರಾಹಕರಿಗೆ ಯಾವುದೇ ಮಾಹಿತಿ ಇಲ್ಲದೆ ಹರಾಜು ಮಾಡಿದ ಖಾಸಗಿ ಬ್ಯಾಂಕಿನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ದೊಣ್ಣಹಳ್ಳಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿ ಐ.ಐ.ಎಫ್.ಎಲ್ ಬ್ಯಾಂಕಿನಲ್ಲಿ ತನ್ನ ಬಳಿ ಇದ್ದ ೧೧.7 ಗ್ರಾಂ ಬಂಗಾರವನ್ನು 2015ರ ಅಕ್ಟೋಬರ್ 26 ರಂದು ಗಿರವಿ ಇಟ್ಟು ಹಣವನ್ನು ಪಡೆದಿದ್ದರು. ಗಿರವಿ ಇಟ್ಟ ಒಡವೆಯನ್ನು ಹಿಂಪಡೆಯಲು ಹಣವನ್ನು ಹೊಂದಿಸಿಕೊಂಡು ಬ್ಯಾಂಕಿನ ಬಳಿ ಹೋದಾಗ ಬ್ಯಾಂಕಿನ ಸಿಬ್ಬಂದಿ ಒಂದೂವರೆ ತಿಂಗಳಿಂದ ಅಲೆದಾಡಿಸಿ ನಂತರ ನಿಮ್ಮ ಒಡವೆಯನ್ನು ಹರಾಜು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.
ಒಡವೆಗಳ ಹರಾಜಿಗೆ ನಿಗದಿತ ಸಮಯವು ಇದ್ದರೂ ನೀವು ನಿಮ್ಮ ಬ್ಯಾಂಕಿನಿಂದ ಯಾವುದೇ ರೀತಿಯ ನೋಟಿಸ್ ನೀಡದೆ ಮತ್ತು ನನಗೆ ಮಾಹಿತಿ ನೀಡದೇ ಒಡವೆಯನ್ನು ಹಾರಾಜು ಹಾಕಿದ್ದೀರಿ ಎಂದು ಪ್ರಶ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರೈತ ಸಂಘಟನೆಯವರು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ ಸಿಬ್ಬಂದಿಯವರಿಂದ ಸರ್ಮಪಕ ಉತ್ತರ ಸಿಗಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ನಾರಾಯಣಸ್ವಾಮಿ, ಆನಂದ ,ರಮೇಶ್, ಮಾರಪ್ಪ, ಲಕ್ಷೀಪತಿ ಮತ್ತಿತರರು ಹಾಜರಿದ್ದರು.