ನಗರದ ಹೃದಯಭಾಗದಲ್ಲಿರುವ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಲ್ಲಿ ಭಾನುವಾರ ಭಗವತಿ ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಓಂ ಶಕ್ತಿ ಅಮ್ಮನವರ ಆಷಾಡ ಮಾಸದ ಗಂಜಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಾಲಯದಲ್ಲಿ ಅಮ್ಮನವರಿಗೆ ಪೂರ್ಣಕುಂಭದೊಂದಿಗೆ ವಸ್ತ್ರ ಮತ್ತು ಮಡಲಕ್ಕಿ ಸೇವೆ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಅಮ್ಮನವರ ಪಲ್ಲಕ್ಕಿಯನ್ನು ದೇವಾಲಯದಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಗಾಂಧಿನಗರದಲ್ಲಿನ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಅಮ್ಮನವರಿಗೆ ಮಡಲಕ್ಕಿ ಸೇವೆ, ಭಕ್ತರಿಗೆ ಪಾನಕ ಮತ್ತು ಹೆಸರುಬೇಳೆ ವಿತರಿಸಲಾಯಿತು.
ಮೆರವಣಿಗೆಯಲ್ಲಿ ಕೋಲಾಟ, ತಮಿಳುನಾಡು ಪಂಬುವಾದ್ಯ, ಕೇರಳದ ಚಂಡೆವಾದ್ಯ, ಪಂಡರಿ ಭಜನೆ, ಡೊಳ್ಳು ಕುಣಿತ, ಮಂಗಳ ವಾದ್ಯ, ಹಲಗೆ ವಾದ್ಯ ವಿಶೇಷ ಆಕರ್ಷಣೆಯಾಗಿತ್ತು. ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಿಂದ ಕಾಮಾಟಿಗರಪೇಟೆ, ಅಶೋಕ ರಸ್ತೆ, ಕೋಟೆ ವೃತ್ತ, ಟಿ.ಬಿ.ರಸ್ತೆ, ಹಳೆ ಆಸ್ಪತ್ರೆ ರಸ್ತೆ, ಕೆಮ್ಮಣ್ಣನ ಬಾಗಿಲು, ಗಾಂಧಿ ನಗರ, ಮುನೇಶ್ವರ ದೇವಾಲಯ, ಉಲ್ಲೂರುಪೇಟೆ, ಅಶೋಕ ರಸ್ತೆಯ ಮೂಲಕ ಮೆರವಣಿಗೆ ದೇವಾಲಯವನ್ನು ತಲುಪಿತು.
“ಊರಿನ ಕ್ಷೇಮಾಭಿವೃದ್ಧಿ ಹಾಗೂ ಶ್ರೇಯಸ್ಸನ್ನು ಕೋರಿ ಓಂ ಶಕ್ತಿ ಅಮ್ಮನವರ ಆಷಾಡ ಮಾಸದ ಗಂಜಿ ಪೂಜಾ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಪೂಜಾ ಮಹೋತ್ಸವದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರೆಲ್ಲರೂ ಭಾಗವಹಿಸಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ” ಎಂದು ಮುರಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ವಸಂತ್ ಕುಮಾರ್, ಉಪಾಧ್ಯಕ್ಷರಾದ ಗಣೇಶ್, ಸೇವಾಕರ್ತರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.