Home News ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ

ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ

0

ಕುವೆಂಪು ಅವರ ತತ್ವದ ಸಾರವಾದ ಆತ್ಮೀಯತೆ ಮತ್ತು ಮಾನವತಾವಾದದ ಅಂಶ ಬಿತ್ತುವುದು, ಗ್ರಾಮೀಣ ಜನರ ಜೀವನದ ಜೊತೆ ಮಾನವೀಯ ಸಂಬಂಧ ಚಿತ್ರಿಸುವ ಸಾಹಿತ್ಯ ಸೃಷ್ಟಿಸುವ ಪ್ರಯತ್ನದಲ್ಲಿದ್ದೇನೆ. ಪ್ರತಿಯೊಬ್ಬರಿಗೂ ಸ್ನೇಹ ಸಂಬಂಧ ವೃದ್ಧಿಸಲಿ, ಪುಸ್ತಕ ಓದುವ ಮೂಲಕ ಜ್ಞಾನ ಸಿಗುತ್ತದೆ, ಪುಸ್ತಕವೆಂಬ ಹೊಸ ಸ್ನೇಹಿತ ಸಿಗುತ್ತಾನೆ ಎಂಬ ಸಂದೇಶವನ್ನು ಸಾರುತ್ತೇನೆ ಎಂದು ಸಾಹಿತಿ ಚಿಕ್ಕರಾಮಯ್ಯ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಹತ್ತನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜನರ ನಡುವೆ ಸಹಾಯ, ಸಹಕಾರ, ಹೊಂದಾಣಿಕೆ, ರಾಜಿ ಮನೋಭಾವದ ಮಾನವೀಯ ಗುಣಗಳು ಈಗಲೂ ಇವೆ. ಅವನ್ನು ಸಾಹಿತ್ಯದ ಮೂಲಕ ತೋರಿಸಲು ಪ್ರಯತ್ನಿಸಿದ್ದೇನೆ ಎಂದರು.
ಹಿರಿಯ ಸಾಹಿತಿ ಶಿವರಾಂ ಮಾತನಾಡಿ, ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯವನ್ನು ನಾಡಿನ ಎಲ್ಲಾ ಗ್ರಂಥಾಲಯಗಳಲ್ಲೂ ನಡೆದರೆ ಆ ಪ್ರಾಂತ್ಯದ ಜನರಿಗೆ ಸ್ಥಳೀಯ ಸಾಹಿತಿಗಳ ಪರಿಚಯವಾಗುತ್ತದೆ. ಸಾಹಿತ್ಯದ ಘಮಲು ಎಲ್ಲೆಡೆ ಪಸರಿಸುತ್ತದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಚಿಕ್ಕರಾಮಯ್ಯ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಚಿಕ್ಕಬಳ್ಳಾಪುರ ಚು.ಸಾ.ಪ. ಅಧ್ಯಕ್ಷರಾಗಿ, ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಿಶ್ವವಿದ್ಯಾದೀಪ- ಸಣ್ಣ ಕತೆಗಳು, ಯುಗದರ್ಮ(ನಾಟಕ), ಕಿರಿಯ ರಾಜಕುಮಾರ- ಜಾನಪದಕಥೆ, ಜಯವಿಜಯ- ಜಾನಪದಕಥೆ, ಚೋರನು ಜಾರನೂ, ಊರಿಗೊಂದು ಮನೆಮಾಡು ಕೃತಿಗಳನ್ನು ರಚಿಸಿದ್ದಾರೆ ಎಂದು ಪರಿಚಯ ಮಾಡಿಕೊಟ್ಟರು.
ಸಾಹಿತಿ ಚಿಕ್ಕರಾಮಯ್ಯ ತಾವು ಬರೆದ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿಗಳಾದ ಚಿಕ್ಕರಾಮಯ್ಯ ಮತ್ತು ಶಿವರಾಮ್‌ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಬಚ್ಚರೆಡ್ಡಿ, ಶ್ರೀನಿವಾಸ್, ಸಹಾಯಕಿ ಬಾಂಧವ್ಯ, ಸತೀಶ್‌, ಸುಂದರನ್‌, ಅಜಿತ್‌ ಕೌಂಡಿನ್ಯ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮುನಿಯಪ್ಪ ಹಾಜರಿದ್ದರು.

error: Content is protected !!