Home News ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 12 ನೇ ತಿಂಗಳ ಕಾರ್ಯಕ್ರಮ

‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 12 ನೇ ತಿಂಗಳ ಕಾರ್ಯಕ್ರಮ

0

ಲೇಖಕನಿಗೆ ಸಾಹಿತ್ಯ ರಚನೆಯು ಆತ್ಮಶೋಧ ಮತ್ತು ಹುಡುಕಾಟವಾದರೆ, ಓದುಗರಿಗೆ ಸಾಹಿತ್ಯದಿಂದ ಅಂತಃಕರಣ, ಮಾನವೀಯತೆ ಮತ್ತು ಮಾನಸಿಕ ವಿಕಸನವಾಗುತ್ತದೆ ಎಂದು ಮಾಸ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು ತಿಳಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 12 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೇಖಕನ ಸುಪ್ತಪ್ರಜ್ಞೆಯಲ್ಲಿ ನಡೆಯುವ ನಿರಂತರ ಹುಡುಕಾಟ ಬರವಣಿಗೆ ರೂಪಕ್ಕೆ ಬರುವುದು ವಿಶೇಷ ಪ್ರಕ್ರಿಯೆ. ತಮ್ಮ ಸುತ್ತಲಿನ ಬದಲಾವಣೆಗಳು, ಮಾನವೀಯ ಸಂಘರ್ಷಗಳು, ಪರಿಸರ ಮುಂತಾದ ಸಂಗತಿಗಳು ಕಾಡುತ್ತವೆ. ಅವು ಬರಹ ರೂಪದಲ್ಲಿ ಹೊರಹೊಮ್ಮುತ್ತವೆ.
ಸಾಹಿತ್ಯಕ್ಕೆ ಆತ್ಮ ವಿಕಸನದ ಶಕ್ತಿಯಿದೆ. ಓದಿನಿಂದ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡು ಬದಲಾವಣೆಯ ಪ್ರವಾಹದಲ್ಲಿ ಈಜಬಹುದಾಗಿದೆ. ಕಾಲದ ಬದಲಾವಣೆಯ ಪರ್ವದಲ್ಲಿ ಮಾನವೀಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯ. ಅದು ಸಾಹಿತ್ಯದಿಂದ ಮಾತ್ರ ಸಿಗಬಲ್ಲದು ಎಂದು ಹೇಳಿದರು.
ಎಲ್ಲೆಡೆ ಸಾಹಿತ್ಯ ಪರಿಚಾರಕರ ಅಗತ್ಯವಿದೆ. ಎಳೆಯ ವಯಸ್ಸಿನಿಂದಲೇ ಸಾಹಿತ್ಯಿಕ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಬೇಕಿದೆ. ಲೇಖಕರ ಆಲೋಚನೆಯನ್ನು ಓದುಗರಿಗೆ ಮುಟ್ಟಿಸುವ ಸೇತುವೆಯಂತೆ ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದರು.
ತಮ್ಮ ಕೃತಿಗಳಾದ ಪ್ರಶ್ನೆ ಮತ್ತು ದೇವರು, ಎರಡು ಲೋಟಗಳು, ಮಾಯಾ ಸರೋವರ (ಕವನಸಂಕಲನಗಳು), ಹಸ್ತಬಲಿ (ಕಥಾಸಂಕಲನ-), ಬಲಿಹಾರ, ಹದ, ಟೈರ್ಸಾಮಿ (ಕಾದಂಬರಿಗಳು-) ಕುರಿತಂತೆ ಅವರು ಮಾತನಾಡಿದರು.
ಜಿಲ್ಲಾ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಎಲ್ಲೂ ನಡೆಯದ ಅಪರೂಪದ ಸ್ಥಳೀಯ ಲೇಖಕರನ್ನು ಪರಿಚಯಿಸುವ ಈ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಹಾಗೂ ಇತರ ತಾಲ್ಲೂಕುಗಳಲ್ಲಿ ನಡೆಸುವ ಉದ್ದೇಶವಿದೆ ಎಂದರು.
ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು, ಜಿಲ್ಲಾ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ, ಸಾಹಿತ್ಯಾಭಿಮಾನಿಗಳಾದ ಲಕ್ಷ್ಮೀನಾರಾಯಣ್‌ ಮತ್ತು ಅನಿಲ್‌ ಪದ್ಮಸಾಲಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಗ್ರಂಥಪಾಲಕ ಎಂ.ಬಚ್ಚರೆಡ್ಡಿ, ಸಹಾಯಕಿ ಬಾಂಧವ್ಯ, ನಿವೃತ್ತ ಶಿಕ್ಷಕ ಸುಂದರನ್‌, ಅಕ್ಕಿಮಂಗಲ ಮಂಜುನಾಥ್‌, ಅಜಿತ್‌ ಕೌಂಡಿನ್ಯ, ನೃತ್ಯಪಟು ಸಿ.ಎನ್‌. ಮುನಿರಾಜು, ದೇವರಾಜ್‌, ವೃಷಬೇಂದ್ರಪ್ಪ, ರಾಮಚಂದ್ರ, ಟಿ.ಟಿ.ನರಸಿಂಹಪ್ಪ, ಸ್ನೇಕ್‌ ನಾಗರಾಜ್‌, ಮಧು, ವಿ.ಹರೀಶ್‌ ಹಾಜರಿದ್ದರು.