Home News ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಪರಿವರ್ತಿಸಿ

ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಪರಿವರ್ತಿಸಿ

0

ಗ್ರಂಥಾಲಯಗಳು ಜ್ಞಾಮವನ್ನು ನೀಡುವ ಅಕ್ಷಯ ಭಂಡಾರಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲೆಯ ಗ್ರಂಥಾಲಯವನ್ನು ಉದ್ಘಾಟಿಸಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು. ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಲಂಡನ್ ನಲ್ಲಿ ಪ್ರತಿದಿನ 18 ಗಂಟೆಗಳ ಕಾಲ ಗ್ರಂಥಾಲಯದಲ್ಲಿ ಓದುತ್ತಿದ್ದರು. ಮೈಸೂರು ಎಸ್ಪಿ ರವಿ.ಡಿ.ಚನ್ನಣ್ಣನವರ್ ಐಪಿಎಸ್ ಪಾಸು ಮಾಡಲು ಗ್ರಂಥಾಲಯದಲ್ಲಿ ಅವರು ಹೆಚ್ಚು ಕಾಲ ಓದ್ದಿದ್ದು ಕಾರಣವಾಗಿದೆ. ಸಾಧಕರು ಉತ್ತಮ ಓದುಗರೆಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳ ಹಕ್ಕು ದಿನಾಚರಣೆಯ ಪ್ರಯುಕ್ತ ಮಕ್ಕಳ ಗ್ರಾಮ ಸಭೆ ಏರ್ಪಡಿಸಲಾಗಿತ್ತು. ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಂ.ಜಿ ಗೋಪಾಲ್ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು. ವಕೀಲ ರಾಮೇಗೌಡ ಅವರು ಮಕ್ಕಳ ದೌರ್ಜನ್ಯ ಮತ್ತು ಲಭ್ಯವಿರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ವೆಂಕಟಾಚಲಪತಿ ಅವರು ಮಕ್ಕಳ ಸಹಾಯ ವಾಣಿಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ವಿಠ್ಠಲ್, ಸವಿತಾ, ವಿನೋದಾ, ದೊಡ್ಡನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.