Home News ಕನಕದಾಸರಭವನ ನಿರ್ಮಿಸಲು ಜಮೀನು ಮಂಜೂರು

ಕನಕದಾಸರಭವನ ನಿರ್ಮಿಸಲು ಜಮೀನು ಮಂಜೂರು

0

ಕುರುಬ ಸಮಾಜದವರಿಗೆ ಕನಕದಾಸರಭವನ ನಿರ್ಮಿಸಲು ಹಿತ್ತಲಹಳ್ಳಿ ಬಳಿ ಎರಡು ಎಕರೆ ಜಮೀನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂದೆ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ದಾಸಶ್ರೇಷ್ಟ ಶ್ರೀ ಕನಕದಾಸರ 530ನೇ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನಕದಾಸರ ಜೀವನ ಚರಿತ್ರೆ ಕುರಿತು ತಿಳಿದುಕೊಂಡರಷ್ಟೆ ಸಾಲದು. ಅವರ ತತ್ವ, ಸಿದ್ದಾಂತ, ಆದರ್ಶಗಳನ್ನು ಸಾಧ್ಯವಾದಷ್ಟು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಮಾನವತಾವಾದಿಯಾಗಿದ್ದ ಕನಕದಾಸರ ಆದರ್ಶಗಳನ್ನು ಈ ಸಮಾಜದ ಎಲ್ಲರೂ ಅದರಲ್ಲೂ ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಬೇಕೆಂದು ಮನವಿ ಮಾಡಿದರು.

ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ಕನಕ ಜಯಂತ್ಯುತ್ಸವದಲ್ಲಿ ತಲೆ ಮೇಲೆ ತೆಂಗಿನಕಾಯಿ ಹೊಡೆಯುವ ‘ತೆಂಗಿನ ಕಾಯಿ ಪವಾಡ’ ಕಾರ್ಯಕ್ರಮ ನಡೆಯಿತು

ಕುಲ ಕುಲವೆಂದು ಹೊಡೆದಾಡಬೇಡಿ, ಕುಲಗಳು ಹುಟ್ಟಿದ್ದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾದರೆ ಜಾತಿ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲವೆಂದು ಸಾರಿದ ಕನಕದಾಸರು ಸುಮಾರು ಐದು ಶತಮಾನಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ ಎಂದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಸಿಟಿಜನ್ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎನ್.ಶಿವಣ್ಣ ಮಾತನಾಡಿ, ಯಾವುದೇ ಜಾತಿ, ಕುಲ, ಮತ ಧರ್ಮವೆನ್ನದೆ ಪ್ರಪಂಚದಲ್ಲಿರುವ ಎಲ್ಲಾ ಮನುಕುಲವೂ ಉದ್ದಾರವಾಗಬೇಕು ಎಂದು ಸಾರಿದ ಕನಕದಾಸರು ಸರ್ವ ಸಮಾನತೆಯ ಸಾಮಾಜಿಕ ಕ್ರಾಂತಿ ಪುರುಷರಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕನಕದಾಸರು ಕೇವಲ ದಾಸಶ್ರೇಷ್ಠರು ಮಾತ್ರವಲ್ಲದೇ ಅತ್ಯುತ್ತಮ ಸಾಹಿತಿ, ಕವಿ, ಗಾಯಕರಾಗಿದ್ದು ಜಾತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದಂತಹ ಮಹಾಪುರುಷನನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಕನಕದಾಸರ ಜಯಂತಿಯನ್ನು ಎಲ್ಲಾ ವರ್ಗದವರೂ ಸೇರಿ ಆಚರಿಸಬೇಕೆಂದರು.
ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ಕನಕ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಕಾಲಿಗೆ ಕೋಲನ್ನು ಕಟ್ಟಿಕೊಂಡು ನಡೆದಾಡುವ ಕಲಾವಿದರು ಮಕ್ಕಳಿಗೆ ಕುತೂಹಲ ಹುಟ್ಟಿಸಿದ್ದರು

ಎಸ್.ಎಸ್.ಎಲ್.ಸಿ ಮತ್ತು ಪಿ,ಯು,ಸಿಯಲ್ಲಿ ಹೆಚ್ಚು ಅಂಕ ತೆಗೆದ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕನಕದಾಸರ ಭಾವಚಿತ್ರವನ್ನು ಹೊಂದಿರುವ ಮುತ್ತಿನ ಪಲಕ್ಕಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಗಾರುಡಿ ಬೊಂಬೆಗಳು, ಡೊಳ್ಳು ಕುಣಿತ, ಮಹಿಳೆಯರ ವೀರಗಾಸೆ, ವಾದ್ಯಗಳು ಭಾಗವಹಿಸಿದ್ದವು. ತಲೆ ಮೇಲೆ ತೆಂಗಿನಕಾಯಿ ಹೊಡೆಯುವ ‘ತೆಂಗಿನ ಕಾಯಿ ಪವಾಡ’ ಕಾರ್ಯಕ್ರಮ ಜನಾಕರ್ಷಕವಾಗಿತ್ತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಗೌರವಾಧ್ಯಕ್ಷ ಎಂ.ಗಣೇಶಪ್ಪ, ಗ್ರೇಡ್ 2 ತಹಶೀಲ್ದಾರ್ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಸರ್ಕಲ್ ಇನ್ಸ್ಪೆಕ್ಟರ್ ಬಿ.ಸಿದ್ದರಾಜು, ನಗರಸಭೆ ಆಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.
 

error: Content is protected !!