ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ತಿಳಿದುಕೊಂಡು ತಮ್ಮ ಭಾಗದಲ್ಲೂ ಸ್ಥಾಪಿಸಬೇಕೆಂಬ ಉದ್ದೇಶದಿಂದ ಕನಕಪುರದ ಐವತ್ತು ಮಂದಿ ರೈತರೊಂದಿಗೆ ಆಗಮಿಸಿರುವುದಾಗಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರದ ಹಿರಿಯ ವಿಜ್ಞಾನಿ ಪ್ರಭಾಕರ್ ರಾವ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಗೆ ಶುಕ್ರವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಗತಿಪರ ರೈತ ಎಚ್.ಕೆ. ಸುರೇಶ್ ಅವರ ತೋಟಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಪ್ರಗತಿಪರ ರೇಷ್ಮೆ ಬೆಳೆಗಾರರಿಂದ ಮಾಹಿತಿ ಪಡೆಯುವುದು ಹಾಗೂ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯನ್ನು ಕನಕಪುರದಲ್ಲೂ ಸ್ಥಾಪಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಹಿತ್ತಲಹಳ್ಳಿಗೋಪಾಲಗೌಡ ಅವರು ತಮ್ಮ ರೇಷ್ಮೆ ಅಭಿವೃದ್ಧಿಯ ಅನುಭವಗಳನ್ನು ಹಂಚಿಕೊಂಡರು. ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ಧನಮೂರ್ತಿ ಮತ್ತು ಸಂಯೋಜಕರಾದ ವೆಂಕಟರೆಡ್ಡಿ ಗಿರಣಿ ರವರು ರೈತ ಉತ್ಪಾದಕ ಸಂಸ್ಥೆಯ ಪರಿಕಲ್ಪನೆ, ಕಾರ್ಯಗಳು, ಪ್ರಯೋಜನಗಳನ್ನು ತಿಳಿಸಿಕೊಟ್ಟರು. ಆಗಮಿಸಿದ್ದ ರೈತರು ತಮ್ಮ ಜಿಲ್ಲೆಯಲ್ಲಿಯೂ ಸಹ ಕಂಪನಿ ಪ್ರಾರಂಭಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.