Home News ಕನ್ನಡ ಝೇಂಕಾರದ ನಿನಾದ

ಕನ್ನಡ ಝೇಂಕಾರದ ನಿನಾದ

0

ಕನ್ನಡ ಸಾಹಿತ್ಯ ಪರಿಷತ್‍ನ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಎಂಟು ದಿನವಷ್ಟೆ ಬಾಕಿ ಇದೆ. ತಾಲೂಕಿನ ಕನ್ನಡ ಬಂಧುಗಳಿಗೆ ಕನ್ನಡ ಝೇಂಕಾರದ ನಿನಾದ ಕೇಳಿಸಲು ಸಕಲ ಸಿದ್ದತೆಗಳು ಭರದಿಂದ ಸಾಗಿವೆ.
ನಗರದ ವಾಸವಿ ರಸ್ತೆಯ ವಾಸವಿ ಕಲ್ಯಾಣ ಮಂಟಪದಲ್ಲಿ ಮಾ 10 ರ ಶುಕ್ರವಾರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ದಿನಪೂರ್ತಿ ಕನ್ನಡ ನಾಡು, ನುಡಿ, ಭಾಷೆ, ನೆಲ ಜಲ, ಸಾಹಿತ್ಯ ಕುರಿತಾದ ನಾನಾ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ಐದು ಸಮ್ಮೇಳನಗಳನ್ನು ತುಂಬು ಹೃದಯದಿಂದ ನೆರವೇರಿಸಿ ಯಶಸ್ವಿಯಾಗಿಸಿದ ತಾಲೂಕಿನ ಕನ್ನಡದ ಬಂಧುಗಳು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಸಹ ಯಶಸ್ವಿಯಾಗಿಸುವ ಭಾರವನ್ನು ಹೆಗಲ ಮೇಲೆ ಹೊತ್ತೊಯ್ಯಲು ಸನ್ನದ್ಧರಾಗಿದ್ದಾರೆ.
6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ನಗರದ ಖ್ಯಾತ ಅಂತರರಾಷ್ಟ್ರೀಯ ಛಾಯಾಗ್ರಾಹಕರಾಗಿರುವ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನಾಧ್ಯಕ್ಷರಾಗಿ ಡಿ.ಜಿ. ಮಲ್ಲಿಕಾರ್ಜುನ: ಲಂಡನ್ನಿನ ರಾಯಲ್ ಫೋಟೋಗ್ರಫಿಕ್ ಸೊಸೈಟಿಯವರು ಪ್ರಕೃತಿ ವಿಭಾಗದ ಛಾಯಾಗ್ರಹಣ ಕಲೆಗೆ ನೀಡಿರುವ ಮನ್ನಣೆ ಅಸೋಸಿಯೇಟ್‍ಷಿಪ್ ಫಾರ್ ರಾಯಲ್ ಫೋಟೋಗ್ರಫಿಕ್ ಸೊಸೈಟಿ ಮತ್ತು ಪ್ಯಾರಿಸ್‍ನ ಅಸೋಸಿಯೇಟ್‍ಷಿಪ್ ಆಫ್ ಫೆಡರೇಷನ್ ಇಂಟರ್‍ನ್ಯಾಷನಲ್ ಡಿ ಲ ಆರ್ಟ್ ಫೋಟೋಗ್ರಫಿಕ್ ಎಂಬ ಮನ್ನಣೆಗೆ ಪಾತ್ರರಾಗಿರುವವರು ಶಿಡ್ಲಘಟ್ಟದ ಡಿ.ಜಿ.ಮಲ್ಲಿಕಾರ್ಜುನ.
ಪ್ರಸ್ತುತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ತಾಲೂಕು ವರದಿಗಾರರಾಗಿರುವ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರು, ರೆಡ್ ಕ್ರಾಸ್ ಸೊಸೈಟಿ ಆಜೀವ ಸದಸ್ಯ ಹಾಗೂ ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಜೀವ ವೈವಿದ್ಯ ನಿರ್ವಹಣಾ ಸಮಿತಿ ಸದಸ್ಯ.
ಡಿ.ಜಿ.ಮಲ್ಲಿಕಾರ್ಜುನ ಅವರು ಬರೆದಿರುವ ಪುಸ್ತಕಗಳು ಅರೆಕ್ಷಣದ ಅದೃಷ್ಟ, ಕ್ಲಿಕ್, ಚಿಟ್ಟೆಗಳು, ಬಟರ್‍ಫ್ಲೈಸ್ ಮತ್ತು ಭೂತಾನ್ ಆನ್ ದಿ ವಿಂಗ್ಸ್ ಆಫ್ ಪೀಸ್‍ಫುಲ್ ಡ್ರಾಗನ್, ಎವೆರಿಮ್ಯಾನ್ ಡಾಟ್ ಕಾಮ್ ಅಂತಾರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ 100ಕ್ಕೂ ಹೆಚ್ಚು ಸ್ವೀಕೃತಿಗಳು, ಬಾಂಬೆ, ಕೊಲ್ಕೊತ್ತ, ಕೇರಳದ ರಾಷ್ಟ್ರೀಯ ಛಾಯಾಗ್ರಾಹಣ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು, ಕೆ.ಪಿ.ಎ ರಾಜ್ಯ ಪ್ರಶಸ್ತಿ, ಡಾ. ಕೃಷ್ಣಾನಂದ ಕಾಮತ್ ಪ್ರತಿಷ್ಠನದ `ಉದಯೋನ್ಮುಖ ಪತ್ರಿಕಾ ಛಾಯಾಗ್ರಾಹಕ’ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉತ್ತಮ ವರದಿಗಾಗಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರ ಮುಕುಟಕ್ಕೆ ಇದೀಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಹೆಮ್ಮೆಯ ಗರಿ ಸಹ ಮೂಡಿದೆ.
ಎಂದಿಗೂ ತೆರೆಯ ಮುಂದೆ ಬರದೆ ತೆರೆಯ ಹಿಂದೆಯೆ ಕುಳಿತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು, ಕೊಡುಗೆಯನ್ನು ನೀಡಿದ 6ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಪೀಠ ಅಲಂಕರಿಸಲಿರುವ ಡಿ.ಜಿ. ಮಲ್ಲಿಕಾರ್ಜುನ ಅವರ ಕುರಿತು ಪರಿಚಯ.
ಶಿಡ್ಲಘಟ್ಟಕ್ಕೆ ಹೈಸ್ಕೂಲ್ ಕಟ್ಟಡ ಮತ್ತು ಸ್ಥಳದ ದಾನಿಗಳಾದ ಬಿ.ವಿರೂಪಾಕ್ಷಪ್ಪನವರ ಮುಮ್ಮಗನಾದ ಇವರು ಹುಟ್ಟಿದ್ದು ಶಿಡ್ಲಘಟ್ಟ ಪಟ್ಟಣದಲ್ಲಿ, ಎಂ.ಎಸ್. ಜ್ಞಾನೇಶ್ವರ್ ಹಾಗೂ ಭಾರತಿಯವರ ಪುತ್ರನಾಗಿ 1975 ರ ಮಾರ್ಚ್ 4 ರಂದು ಜನನ.
ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಅವರು, ಏಳನೆಯ ತರಗತಿಯನ್ನು ಚಿಕ್ಕಬಳ್ಳಾಪುರದ ಸೆಂಟ್ ಜೋಸೆಫ್ ಶಾಲೆಯಲ್ಲಿ, ಪ್ರೌಢಶಾಲೆಯನ್ನು ಎಂ.ಪಿ.ಎಚ್.ಎಸ್ ಶಾಲೆಯಲ್ಲಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಚಿಕ್ಕಮಗಳೂರಿನ ಎ.ಐ.ಟಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎನ್.ಎಚ್.ಎಸ್) ನಡೆಸುವ ಪಕ್ಷಿಶಾಸ್ತ್ರದ ಕೋರ್ಸ್‍ನ ಪ್ರಮಾಣಪತ್ರ ಪಡೆದಿರುವ ಇವರು ಬಿ.ಎನ್.ಎಚ್.ಎಸ್ ವತಿಯಿಂದ ಒರಿಸ್ಸಾದ ಚಿಲ್ಕಾ ಸರೋವರದಲ್ಲಿ ಆಯೋಜಿಸಿದ್ದ ಪಕ್ಷಿಗಳಿಗೆ ಉಂಗುರ ತೊಡಿಸುವ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಸುತ್ತಮುತ್ತ ಸುಮಾರು 32 ಕ್ಕೂ ಹೆಚ್ಚು ವಿಧದ ಜೇಡಗಳನ್ನು ಗುರುತಿಸಿ ಛಾಯಾಗ್ರಹಣ ಮಾಡಿರುವುದಲ್ಲದೆ, ವಿವಿಧ ಜಾತಿಯ ಚಿಟ್ಟೆಗಳು, ಕೀಟಗಳು, ಹಕ್ಕಿಗಳು, ಹಾವುಗಳು ಹಾಗೂ ಪ್ರಾಣಿಗಳನ್ನು ಗುರುತಿಸಿ ಛಾಯಾಗ್ರಹಣ ಮಾಡಿದ್ದಾರೆ. ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಕಿರಿಯರಲ್ಲಿ ಜೀವವೈವಿದ್ಯದ ಬಗ್ಗೆ ಅರಿವು ಮೂಡಿಸುತ್ತಾ ಪರಿಸರ ಸಂರಕ್ಷಣೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿರುತ್ತಾರೆ.
ಈಜಿಪ್ಟ್, ಜೋರ್ಡಾನ್, ಸಿಂಗಾಪುರ, ಮಲೇಶಿಯಾ, ಟರ್ಕಿ, ಭೂತಾನ್, ಥಾಯ್ಲೆಂಡ್ ಮತ್ತು ಯು.ಎ.ಇ ದೇಶಗಳಿಗೆ ಪ್ರವಾಸ ಮಾಡಿ ಪ್ರವಾಸ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆದಿದ್ದಾರೆ. ಭೂತಾನ್ ದೇಶದ ರಾಜಧಾನಿ ಥಿಂಪು ನಗರದ `ನೆಹರೂ ವ್ಯಾಂಗ್ಚುಕ್ ಕಲ್ಚರಲ್ ಸೆಂಟರ್’ನ ಕಲಾ ಗ್ಯಾಲರಿಯಲ್ಲಿ 2015ರ ಮಾರ್ಚ್ 4 ರಿಂದ 6 ರವರೆಗೂ ಮೂರು ದಿನಗಳ ಕಾಲ ಇವರ ಛಾಯಾಚಿತ್ರಗಳ ಪ್ರದರ್ಶನ ನಡೆದಿತ್ತು.
ಅಂಚೆ ಚೀಟಿಗಳನ್ನು ಸಂಗ್ರಹಿಸುವ ಇವರಿಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ `ಕರ್ನಾಪೆಕ್ಸ್ – 2015′ ವಿವಿಧ ರಾಜ್ಯಗಳ ವಲಯ ಮಟ್ಟದ ಅಂಚೆ ಚೀಟಿಗಳ ಸ್ಪರ್ಧೆಯಲ್ಲಿ ಇವರ ಸಂಗ್ರಹಕ್ಕೆ ಕಂಚಿನ ಪದಕ ಲಭಿಸಿತ್ತು.