ತಾಲ್ಲೂಕಿನಲ್ಲಿ ಜುಲೈ ೩೦ ರಂದು ನಡೆಯಲಿರುವ ಎಂಟನೇ ಸಾಹಿತ್ಯ ಸಮ್ಮೇಳನವನ್ನು ಮಹಿಳೆಯರು ಮತ್ತು ರಂಗಭೂಮಿಗೆ ಸಮರ್ಪಿಸಲು ಕಸಾಪ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಅವರನ್ನು ಕಸಾಪ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಅವರು ಮಾತನಾಡಿದರು.
ಇದುವರೆಗೂ ಏಳು ಸಾಹಿತ್ಯ ಸಮ್ಮೇಳನಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿವೆ. ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಗ್ರಾಮೀಣ ಭಾಗಕ್ಕೆ, ಮಹಿಳೆಯರಿಗೆ ಮತ್ತು ರಂಗಭೂಮಿಗೆ ಈ ಮೂಲಕ ಕಸಾಪ ಆದ್ಯತೆಯನ್ನು ನೀಡಿದೆ.
ಜಿಲ್ಲೆಯ ಏಕೈಕ ರಂಗಭೂಮಿ ಕಲಾವಿದೆಯಾದ ದೇವರಮಳ್ಳೂರು ಯಶೋದಮ್ಮ, ೪೫ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರದಲ್ಲೂ ಇವರು ನಟಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಗುರುವಾರ ಸಂಜೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನ ಹಲವಾರು ಮಂದಿ ಸಾಧಕರ ಹೆಸರನ್ನು ಸಾಹಿತ್ಯಾಭಿಮಾನಿಗಳು ಸೂಚಿಸಿದ್ದರು. ಅವರಲ್ಲಿ ಬಹುತೇಕರು ಈ ಬಾರಿ ಮಹಿಳೆಯರಿಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ ಎಂದರು.
ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಾರ್ಯದರ್ಶಿಗಳಾದ ಚಾಂದ್ ಪಾಷ, ಸತೀಶ್, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ದಾಕ್ಷಾಯಿಣಿ, ಸುಧೀರ್, ಮಂಜುನಾಥ್ ಹಾಜರಿದ್ದರು.