Home News ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಝೋನ್ ದಿನಾಚರಣೆ

ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಝೋನ್ ದಿನಾಚರಣೆ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು. ಓಝೋನ್ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಓಝೋನ್ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ೪೦ ವಿದ್ಯಾರ್ಥಿಗಳು ಓಝೋನ್, ರಾಕೆಟ್, ಅಗ್ನಿಪರ್ವತ, ಶ್ವಾಸಕೋಶ, ಸೂಕ್ಷ್ಮದರ್ಶಕ, ಇತ್ಯಾದಿ ವೈಜ್ಞಾನಿಕ ಪ್ರಯೋಗ ಹಾಗೂ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,‘ಪರಿಸರ ದಿನಾಚರಣೆ ಹಾಗೂ ಓಝೋನ್ ದಿನಾಚರಣೆಗಳ ಯಾಂತ್ರಿಕ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ನಿಜವಾಗಿಯೂ ಪರಿಸರ ಕಾಳಜಿಯಿಂದ ನಮ್ಮ ಜೀವನಶೈಲಿಗಳನ್ನು ಮರುರೂಪಿಸಿಕೊಂಡರೆ ಮಾತ್ರ ಅದೇ ನಿಜವಾದ ಆಚರಣೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತುಮ್ಮನಹಳ್ಳಿ ಸಿ.ಆರ್.ಪಿ. ಚಂದ್ರಶೇಖರ್, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಕುಮಾರ್, ಕಾರ್ಯದರ್ಶಿ ವಾಸುದೇವ್, ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ದೇವರಾಜ್, ಮುನಿಯಪ್ಪ ಶಾಲಾಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್.ಕಲಾಧರ, ಟಿ.ಜೆ.ಸುನೀತ ಹಾಗೂ ಅಂಗನವಾಡಿ ಶಿಕ್ಷಕಿ ಪದ್ಮಾವತಮ್ಮ ಭಾಗವಹಿಸಿದ್ದರು. ಆಶಯಗೀತೆಯನ್ನು ವಿದ್ಯಾರ್ಥಿ ಧನುಷ್ ಹಾಡಿದರು. ವಿದ್ಯಾರ್ಥಿನಿ ಭವಾನಿ ನಿರೂಪಿಸಿದರು.