Home News ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತವಾದುದು

ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತವಾದುದು

0

ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡದ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿದ್ದು, ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಈಚೆಗೆ ರೈತ ನಾರಾಯಣಪ್ಪ ಅವರ ಮನೆಯಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಕನ್ನಡ ಸಿರಿನುಡಿಗಳು. ಇವುಗಳನ್ನು ದಾಖಲಿಸಿ ಉಳಿಸಬೇಕಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಗುಡಿ ಕೈಗಾರಿಕೆಗಳು, ಗ್ರಾಮೀಣ ಸೊಗಡು, ಕಲೆ ಮಾಯವಾಗುತ್ತಿವೆ. ಕನ್ನಡದ ದೇಸೀ ಸೊಗಡು ಮಾಯವಾದಲ್ಲಿ ಪರಂಪರೆ – ಸಂಸ್ಕೃತಿಯೂ ಕಣ್ಣಂಚಿನಿಂದ ಮರೆಯಾದೀತು ಎಂದು ಹೇಳಿದರು.
ಗ್ರಾಮದ ಮಕ್ಕಳಾದ ಯಶೋಧ, ಅರ್ಪಿತ, ವಂದನಾ, ರಾಧಿಕಾ, ಕಾವ್ಯ ಹಾಡುಗಳನ್ನು ಹಾಡಿ ಕಸಾಪ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ಪಡೆದರು.
ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್‌ ಕುವೆಂಪು ರಚನೆಯ ಗೀತೆಗಳನ್ನು ಹಾಡಿದರು. ಕಸಾಪ ತಾಲ್ಲೂಕು ಘಟಕದ ವತಿಯಿಂದ ಮನೆಯ ಮಾಲೀಕರಾದ ನಾರಾಯಣಪ್ಪ ಅವರನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಈರಪ್ಪ, ಆಂಜಿನಮ್ಮ ಈರಪ್ಪ, ಗ್ರಾಮಸ್ಥರಾದ ಲಕ್ಷ್ಮಣಮೂರ್ತಿ, ಕವಿತಾ, ಗೌರಮ್ಮ, ಮಂಜುಳ, ಮುನೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.