Home News ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ

0

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಸಿ ಬಿ ಐ ಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರಗತಿಪರ ಚಿಂತಕಿ, ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಈ ರೀತಿಯಲ್ಲೇ ಈ ಹಿಂದೆಯೂ ವಿಚಾರವಾದಿಗಳಾದ ಡಾ ಎಂ ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆಗಳು ನಡೆದಿವೆ. ಇದುವರೆಗೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ದುರಂತವಾಗಿದೆ. ಪದೇ ಪದೇ ವಿಚಾರವಾದಿಗಳ ಹತ್ಯೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಕಗ್ಗೊಲೆಯ ಸಂಕೇತವಾಗಿದೆ. ಸರ್ಕಾರದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ನಿದರ್ಶನವಾಗಿದ್ದು, ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ. ಈ ಹತ್ಯೆಯ ತನಿಖೆಯನ್ನು ಸಿ ಬಿ ಐ ಗೆ ಒಪ್ಪಿಸಬೇಕು, ಪ್ರಗತಿಪರ ಚಿಂತಕರಿಗೆ, ಪತ್ರಕರ್ತರಿಗೆ, ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು, ಹಂತಕರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ಹಿತ್ತಲಹಳ್ಳಿ ದೇವರಾಜ್, ಚಿಕ್ಕನರಸಿಂಹಯ್ಯ, ಸೊಣ್ಣೇನಹಳ್ಳಿ ತಿರುಮಲೇಶ್, ಆಂಜಿನಪ್ಪ ಹಾಜರಿದ್ದರು.