ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಾಡಿನ ಖ್ಯಾತ ಕವಿ, “ಹಚ್ಚೇವು ಕನ್ನಡದ ದೀಪ” ಗೀತೆಯ ರಚನೆಕಾರ ಡಿ.ಎಸ್.ಕರ್ಕಿ ಅವರ ಜನುಮ ದಿನವನ್ನು ಕಸಾಪ ವತಿಯಿಂದ ದೀಪಗಳನ್ನು ಬೆಳಗುವ ಮೂಲಕ ಆಚರಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಬಹುತೇಕ ಕನ್ನಡ ಸಮಾರಂಭಗಳು ಪ್ರಾರಂಭವಾಗುವುದು “ಹಚ್ಚೇವು ಕನ್ನಡದ ದೀಪ” ಭಾವ ಗೀತೆಯಿಂದ. ಈ ಗೀತೆಯನ್ನು ಬರೆದವರು ನಮ್ಮ ನಾಡಿನ ಹೆಮ್ಮೆಯ ಸಾಹಿತಿ ಡಿ. ಎಸ್. ಕರ್ಕಿ ಅವರು. ದುಂಡಪ್ಪ ಸಿದ್ಧಪ್ಪ ಕರ್ಕಿ ಅವರು ಈ ಹಾಡಿನಿಂದ ಕನ್ನಡಿಗರ ಮನೆಮಾತಾಗಿದ್ದಾರೆ ಎಂದು ಅವರು ತಿಳಿಸಿದರು.
ಕರ್ಕಿ ಅವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907ರ ನವೆಂಬರ್ 15ರಂದು ಜನಿಸಿದರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. “ನಕ್ಷತ್ರಗಾನ”, “ಭಾವತೀರ್ಥ”, “ಗೀತಗೌರವ”, “ನಮನ”, “ಕರ್ಕಿ ಕಣಗಲ” ಇವು ಕರ್ಕಿ ಅವರ ಪ್ರಮುಖ ಕವನ ಸಂಕಲನಗಳು. ಪ್ರೊ. ಕರ್ಕಿ ಅವರ ಕೃತಿ “ಗೀತ ಗೌರವ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಕರ್ಕಿಯವರು ಸೇವೆ ಮಾಡಿದ್ದಾರೆ ಎಂದು ವಿವರಿಸಿದರು.
ಮುಖ್ಯ ಶಿಕ್ಷಕಿ ಪಿ.ವಿ.ಸುಜಾತ ಮಾತನಾಡಿ, ಕನ್ನಡದ ಬೆಳಕಿನ ಕಿರಣಗಳನ್ನು ನಾಡಿನೆಲ್ಲೆಡೆ ಹರಡಿಸಿ, ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ “ಹಚ್ಚೇವು ಕನ್ನಡದ ದೀಪ” ಗೀತೆಯನ್ನು ರಚಿಸಿರುವ ಹೆಮ್ಮೆಯ ಸಾಹಿತಿ ಡಿ. ಎಸ್. ಕರ್ಕಿಯವರ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಲೇಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ “ಹಚ್ಚೇವು ಕನ್ನಡದ ದೀಪ” ಗೀತೆಯನ್ನು ಕೈಯಲ್ಲಿ ದೀಪವನ್ನು ಹಿಡಿದು ಹಾಡಿದರು.
ಶಿಕ್ಷಕರಾದ ಸಿ.ವರಮ್ಮ, ಎಲ್.ಕೋಮಲ ಹಾಜರಿದ್ದರು.