ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಧಾರ್ಮಿಕ ಹಿನ್ನೆಲೆಯ ಜತೆಗೆ ರೈತರಿಗೆ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಹಂಚಿಕೊಂಡು ಸಂಭ್ರಮಿಸುವ ದಿನ ಇದಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಕಸಾಪ ತಾಲ್ಲೂಕು ಘಟಕ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಆಚರಿಸಿದ ಸುಗ್ಗಿ-ಹುಗ್ಗಿ ಸಂಕ್ರಾಂತಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯೆಂದರೆ, ರೈತಪರಿವಾರವು ತಮ್ಮ ಬೆಳೆ, ಹೊಲ, ಎತ್ತು, ದನ ಕರುಗಳ ಜತೆ ಸಂಭ್ರಮಿಸುವ ಹಬ್ಬ. ನಮ್ಮಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತೇವೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ತಿಂಡಿಯನ್ನೇ ಈ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು , ಜೊತೆಗೆ ಕಬ್ಬಿನ ತುಂಡುಗಳ ಮಿಶ್ರಣವನ್ನು ತಯಾರಿಸಿ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಗ್ರಾಮಗಳಲ್ಲಿ ಎತ್ತುಗಳು ಕಡಿಮೆಯಾಗುತ್ತಿವೆ, ಬಹುತೇಕ ಕೃಷಿ ಪರಿಕರಗಳು ಮಾಯವಾಗಿವೆ. ಆಧುನಿಕತೆಯು ಜಾನಪದವನ್ನು ಕಳೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಂಗೋಲಿ ಹಾಕಿ, ರಾಗಿಯ ರಾಶಿಗೆ ಮಾವಿನ ಸೊಪ್ಪು, ಕಬ್ಬು, ಹೂಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿ, ಕೃಷಿ ಪರಿಕರಗಳಾದ ನೊಗ, ನೇಗಿಲು, ಮೊರ, ಕುಡುಗೋಲು, ಜರಡಿ, ಕೈತಂತಿ ಮುಂತಾದ ಕಣದ ಸಾಮಾನುಗಳನ್ನು ಜೋಡಿಸಿಟ್ಟು, ಕಬ್ಬು, ಕಾಶಿ ಮತ್ತು ಊಶಿ ಹುಲ್ಲು, ಮಾವಿನ ಸೊಪ್ಪು, ಶೃಂಗರಿಸಿದ ಎತ್ತುಗಳ ಜೊತೆಯಲ್ಲಿಟ್ಟು ಪೂಜೆ ಸಲ್ಲಿಸಿದರು. ಎತ್ತುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಕಬ್ಬನ್ನು ತಿನ್ನಿಸಿದರು. ಭಾಗವಹಿಸಿದ್ದವರಿಗೆಲ್ಲಾ ಎಳ್ಳು ಬೆಲ್ಲವನ್ನು ಹಂಚಲಾಯಿತು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ಗ್ರಾಮದಲ್ಲಿ ಉತ್ತಮವಾಗಿ ರಂಗೋಲಿ ಹಾಕಿದ್ದ ಮಹಿಳೆಯರಾದ ಪುಷ್ಪ ಪ್ರಸಾದ್, ಭವ್ಯ, ಅಂಜಲಿ, ನಿಖಿತ, ಹೆಚ್ಚು ಹಾಲು ಉತ್ಪಾದಿಸುವ ಆನಂದಮೂರ್ತಿ, ತಳವಾರ ಮುನಿಕೃಷ್ಣಪ್ಪ, ಎತ್ತುಗಳ ಮಾಲೀಕ ವೆಂಕಟೇಶ್, ಗ್ರಾಮದ ಹಿರಿಯ ರೈತ ಬಸಪ್ಪ ಹಾಗೂ ಉತ್ಸಾಹಿ ಯುವಕರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಬಿ.ನಾಗರಾಜ್, ಎಸ್.ಚಂದ್ರಶೇಖರ್, ಕೆ.ಶ್ರೀನಾಥ್, ಎಂ.ಪ್ರಸಾದ್, ಎಂ.ಶ್ರೀಕಾಂತ್, ಎಂ.ಮುನಿರಾಜು, ಜಿ.ವೇಣು, ಜಿ.ನರಸಿಂಹಮೂರ್ತಿ, ಶ್ರೀನಿವಾಸ್, ಟಿ.ಪ್ರತೀಪ್, ಮುನಿಕೃಷ್ಣಪ್ಪ, ಹನುಮಂತರೆಡ್ಡಿ, ಚಿಕ್ಕಣ್ಣ, ವೆಂಕಟೇಶ್, ಸಂಪತ್ತು, ಪ್ರಸನ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.