Home News ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ

ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ

0

ತಾಲ್ಲೂಕಿನ ಘಟಮಾರನಹಳ್ಳಿಯ ಕೃಷಿ ಪಂಡಿತ ಪುರಸ್ಕೃತ ರೈತ ಜಿ.ಬಿ.ಆಂಜಿನಪ್ಪ ಅವರ ಮನೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ‘ಕಸಾಪ ನಡಿಗೆ ಸಾಧಕರ ಕಡೆಗೆ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಮಾತನಾಡಿದರು.
ಮಣ್ಣಿನ ಬದುಕು ಮುಖ್ಯವೆಂದು ನೆಲದ ಪ್ರೀತಿಯಿಂದ ಬದುಕುವ ರೈತ ಸಾಮಾನ್ಯರೇ ಶ್ರೀಮಾನ್ಯರು ಎಂದು ಅವರು ತಿಳಿಸಿದರು.
ನೆಲ ಮೂಲದ ಕೊಂಡಿ ಕಳಚುತ್ತಿದೆ. ಅಕ್ಷರ ಓದಿದ ತಲೆಮಾರು ಕಾಂಕ್ರೀಟ್‌ ನೀತಿಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ ರೈತರನ್ನು ಗುರುತಿಸಿ ಗೌರವಿಸುವ ಪ್ರೋತ್ಸಾಹಿಸುವ ಕೆಲಸ ಅತ್ಯಂತ ಜರೂರಾದದ್ದು. ಈ ಕೆಲಸವನ್ನು ಕಸಾಪ ಕೈಗೆತ್ತುಕೊಂಡಿದೆ. ಇದೂ ಕೂಡ ಕನ್ನಡದ ಕೆಲಸವೇ ಆಗಿದೆ. ಎಳೆ ತಲೆಮಾರಿಗೆ ಕೃಷಿ ಜ್ಞಾನವನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಎಲೆ ಮರೆಯ ಕಾಯಿಗಳಂತಿರುವ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಪ್ರಯತ್ನಕ್ಕೆ ನಾವು ‘ಕಸಾಪ ನಡಿಗೆ ಸಾಧಕರ ಕಡೆಗೆ’ ಎಂದು ಹೆಸರಿಟ್ಟಿದ್ದೇವೆ. ತಮ್ಮ ಪಾಡಿಗೆ ತಾವು ತಮ್ಮತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿಕೊಂಡಿರುವವರನ್ನು ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌ ಮಾತನಾಡಿ, ಹಳ್ಳಿಯ ಒಬ್ಬೊಬ್ಬ ಹಿರಿಯರೂ ಕೃಷಿ ಜ್ಞಾನವನ್ನು ಹೊಂದಿರುವ ಪದಕೋಶದಂತೆ. ಅವರ ಅನುಭವ ಜ್ಞಾನಕ್ಕೆ ಮನ್ನಣೆ ನೀಡಬೇಕು. ಕೃಷಿ ತಳಿಗಳನ್ನು ಉಳಿಸಿಕೊಳ್ಳುವಂತೆ ಈ ಹಿರಿಯರ ಜ್ಞಾನವನ್ನು ಸಹ ಉಳಿಸಿಕೊಳ್ಳಬೇಕಿದೆ. ಪರಂಪರೆಯ ಕೃಷಿ ಜ್ಞಾನವನ್ನು ಮರೆತರೆ ನಮ್ಮ ಹಳ್ಳಿಗಳು ಬಡವಾಗುತ್ತವೆ ಎಂದು ನುಡಿದರು.
ರೈತ ಮತ್ತು ಯೋಧ ಎರಡು ಕಣ್ಣುಗಳಂತೆ ಇಬ್ಬರನ್ನೂ ಗೌರವಿಸುವ ಸಂಸ್ಕಾರ ನಮ್ಮದು. ಕಸಾಪ ಕೂಡ ಈ ಸಂಸ್ಕಾರದ ಪ್ರತೀಕವಾಗಿ ಇಬ್ಬರೆಡೆಗೂ ಗೌರವವನ್ನು ಹೊಂದಿದೆ ಎಂದರು.
ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿದ್ಧೀಕರಣ ವಿಭಾಗದಲ್ಲಿ 2013–14ನೇ ಸಾಲಿನ ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಗೌರವಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ನಂಜುಂಡಪ್ಪ, ಜಂಗಮಕೋಟೆ ಹೋಬಳಿ ಘಟಕದ ಅಧ್ಯಕ್ಷ ಜಗದೀಶ್‌ಬಾಬು, ಶಂಕರ್‌, ರಾಮಚಂದ್ರ, ಮಂಜುನಾಥ, ನರಸಿಂಹಮೂರ್ತಿ, ಜಿ.ವಿ.ಕೆಂಪಣ್ಣ, ಜಿ.ಬಿ.ರಾಜಶೇಖರ, ರಾಜಣ್ಣ, ವೀರೇಂದ್ರಕುಮಾರ್‌, ರಾಮಾಂಜಿನಪ್ಪ, ಚನ್ನಕೇಶವ, ಪ್ರಕಾಶ್‌, ಅಶೋಕ, ಕೆ.ಶ್ರೀನಿವಾಸ್‌, ಶಕುಂತಲಮ್ಮ, ಚಂದ್ರಕಲಾ ಹಾಜರಿದ್ದರು.

error: Content is protected !!