Home News ಕಸಾಪ ವತಿಯಿಂದ ಮಕ್ಕಳಿಗೆ ದೇಶಭಕ್ತರ ಪರಿಚಯ

ಕಸಾಪ ವತಿಯಿಂದ ಮಕ್ಕಳಿಗೆ ದೇಶಭಕ್ತರ ಪರಿಚಯ

0

ಬ್ರಿಟಿಷ್ ಆಡಳಿತ ಕೊನೆಗೊಂಡು ದೇಶ ಸ್ವಾತಂತ್ರ್ಯಗೊಂಡ ಬಳಿಕ ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಹಾನ್ ದೇಶಭಕ್ತರಾಗಿದ್ದರು. ‘ಉಕ್ಕಿನ ಮನುಷ್ಯ’ ರೆಂದೇ ಅಮರರಾದ ಅವರ ಸಾಮಾಜಿಕ ಹೋರಾಟಗಳ ಬಗ್ಗೆ ತಿಳಿಯುವ ಮೂಲಕ ದೇಶ ಕಟ್ಟಿದ ಚರಿತ್ರೆಯನ್ನು ಅರಿಯಬೇಕಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 70 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಕಸಾಪ ವತಿಯಿಂದ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಪುಸ್ತಕ ಬಹುಮಾನ ನೀಡುವ ಜೊತೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾಪಟು ಧ್ಯಾನ್ ಚಂದ್ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ, ಕ್ರೀಡೆಯ ಆಸಕ್ತಿ ಉಳ್ಳವರಿಗೆ ಇಂಥಹ ಕ್ರೀಡಾಪಟುಗಳು ಮಾದರಿಯಾಗಬೇಕೆಂದು ನುಡಿದರು.
ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಕುವೆಂಪು ರಚಿಸಿರುವ ಗೀತೆಗಳನ್ನು ಹಾಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಒಂಭತ್ತನೇ ತರಗತಿಯ ಎ. ಮಾನಸ, ಸಿ.ಕೆ. ಸೃಜನ ಮತ್ತು ಸಿ.ಎಂ.ಅನೂಷ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎ.ದಿವ್ಯಾ, ಕೀರ್ತನಾ ಮತ್ತು ಶಿವಮಣಿ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಗ್ರಂಥಾಲಯಕ್ಕೆ ‘ಸುಭಾಷ್ ಚಂದ್ರ ಬೋಸ್’, ‘ಸ್ವಾಮಿ ವಿವೇಕಾನಂದ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಕಸಾಪ ಸದಸ್ಯರಾದ ದೇವರಮಳ್ಳೂರು ಮಹೇಶ್, ರಮೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಮುನಿರಾಜು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಶಿವಶಂಕರ್, ಶೀಕ್ಷಕರಾದ ಬಿ. ರಾಜಶೇಖರ್, ಎಂ.ಜೆ. ರಾಜೀವಗೌಡ, ನಾಗೇಶ್, ಲಕ್ಷ್ಮೀಕಾಂತಮ್ಮ, ಎಂ. ವೆಂಕಟೇಶಪ್ಪ, ಎಂ. ಮಮತಾ, ಬಿ. ಶ್ರೀನಿವಾಸ್, ಜೆ.ಸಿ. ಪ್ರಿಯಾಂಕ, ಎಚ್.ಎಸ್. ವಿಠಲ್, ಎಂ. ಶಿವಕುಮಾರ್, ಬಿ.ಸಿ. ದೊಡ್ಡನಾಯ್ಕ, ಟಿ.ಇ. ಶ್ರೀನಿವಾಸ, ಡಿ. ಭವ್ಯ, ಪಿ. ಸವಿತ, ಎ.ವಿ. ನವೀನ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.