ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಸುಮಾ ರಂಗನಾಥ್ ದಂಪತಿಯನ್ನು ಕಸಾಪ ವತಿಯಿಂದ ಮಂಗಳವಾರ ಸನ್ಮಾನಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕ್ಷೀರ ಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರ ಚಿಂತನೆಯಿಂದಾಗಿ ದೇಶ ಹೈನೋದ್ಯಮದಲ್ಲಿ ಅಪಾರ ಸಾಧನೆ ಮಾಡಲು ಸಾಧ್ಯವಾಯಿತು. ಡಾ. ವರ್ಗೀಸ್ ಕುರಿಯನ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ರೈತರು ಸ್ವಾವಲಂಬಿಗಳಾಗಿ ಬದುಕಬಹುದು ಎಂದು ತೋರಿಸಿಕೊಟ್ಟು, ಇಂದು ಕೋಟ್ಯಂತರ ಕುಟುಂಬಗಳು ಹೈನುಗಾರಿಕೆಯಿಂದಲೇ ಆರ್ಥಿಕ ಸಬಲತೆ ಹೊಂದುವುದಕ್ಕೆ ಕಾರಣರಾದವರು ಡಾ. ವರ್ಗೀಸ್ ಕುರಿಯನ್. ಅವರ ಮಾರ್ಗದಲ್ಲಿಯೇ ಕೋಚಿಮುಲ್ ಕೂಡ ನಡೆದಿದೆ. ರೇಷ್ಮೆಯಲ್ಲಿ ನಷ್ಟವನ್ನು ಅನುಭವಿಸಿದರೂ ಹೈನುಗಾರಿಕೆಯಿಂದ ಆರ್ಥಿಕ ಸಬಲರಾಗುವಂತಾಗಿದೆ ಎಂದರು.
ಹೈನುಗಾರಿಕೆಯಲ್ಲಿ ಇತರರಿಗೆ ಮಾದರಿಯಾಗಿರುವ ನಾಗಮಂಗಲ ಗ್ರಾಮದ ಸುಮಾ ರಂಗನಾಥ್ ಅವರು, ತಮ್ಮ ಪತಿ, ಅತ್ತೆಯವರ ಸಹಕಾರದಿಂದ ಹದಿನಾಲ್ಕು ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ ೧೪೦ ಲೀಟರ್ ಹಾಲನ್ನು ಡೈರಿಗೆ ನೀಡುತ್ತಾರೆ. ಹೈನುಗಾರಿಕೆಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಕೋಚಿಮುಲ್ ನಿಂದ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇವರನ್ನು ಗೌರವಿಸುವ ಮೂಲಕ ಕಸಾಪ ರಾಷ್ಟ್ರೀಯ ಹಾಲು ದಿನವನ್ನು ಆಚರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
ಎಂ.ಪಿ.ಸಿ.ಎಸ್ ಅಧ್ಯಕ್ಷ ರಾಜಣ್ಣ, ಕಸಾಪ ಹೋಬಳಿ ಅಧ್ಯಕ್ಷ ಜಗದೀಶ್ ಬಾಬು, ತಮ್ಮಣ್ಣ, ಮೂರ್ತಿ, ಶಿವಕುಮಾರ್, ಗೌರಿಶಂಕರ್, ಭವ್ಯ, ಕನಕರತ್ನಮ್ಮ, ಮಂಗಳಮ್ಮ, ಭಾರತಮ್ಮ, ಅನಿತಾ, ನಂಜಮ್ಮ, ಸುಶೀಲಾ, ಶ್ವೇತಾ, ದೇವರಾಜ್ ಹಾಜರಿದ್ದರು.