Home News ಕಾಂಗ್ರೆಸ್ ಪಕ್ಷದ ಉಮೇದುವಾರಿಕೆ ಸ್ವೀಕಾರಕ್ಕೆ ಆಗಮಿಸಿದ ಕೆಪಿಸಿಸಿ ವೀಕ್ಷಕರು

ಕಾಂಗ್ರೆಸ್ ಪಕ್ಷದ ಉಮೇದುವಾರಿಕೆ ಸ್ವೀಕಾರಕ್ಕೆ ಆಗಮಿಸಿದ ಕೆಪಿಸಿಸಿ ವೀಕ್ಷಕರು

0

ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಕಷ್ಟ ಬಂದಾಗ ಬಾಗಿಲು ಬಡಿದೊಡನೇ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ. ಅಧಿಕಾರ ಸ್ವಹಿತಕ್ಕೆ ಅಲ್ಲ, ಸ್ವಜನ ಹಿತಕ್ಕಾಗಿರಬೇಕು ಎಂದು ಕೆಪಿಸಿಸಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಂಸದ ಪ್ರೊ.ಐ.ಜಿ.ಸನದಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಉಮೇದುವಾರಿಕೆಯನ್ನು ಪಡೆಯಲು ಆಗಮಿಸಿದ್ದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಸೇವೆ, ತ್ಯಾಗ ಮತ್ತು ಸಮರ್ಪಣೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಬಡವರ ಕಣ್ಣಿರನ್ನು ಒರೆಸದಿದ್ದರೆ ಅದು ನಮ್ಮನ್ನು ಬೆಂಕಿಯಂತೆ ಸುಡುತ್ತದೆ ಎಂಬ ನಮ್ಮ ಹಿರಿಯ ಮುಖಂಡರ ನುಡಿಯಿಂದ ಪ್ರೇರೇಪಿತಗೊಂಡು ಪಕ್ಷವು ಮುನ್ನಡೆಯುತ್ತಿದೆ. ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದವರ, ಬಡವರ, ನಿರ್ಗತಿಕರ ಪರವಾಗಿ ನಿಲ್ಲುವುದು ಕಾಂಗ್ರೆಸ್‌ ಪಕ್ಷವೊಂದೇ. ಬಿಜೆಪಿಯು ಸಂವಿಧಾನವನ್ನು ತಿರುಚುವ ಹುನ್ನಾರದಿಂದ ಹಿಂದುಳಿದ ವರ್ಗದವರನ್ನು ತುಳಿಯಲು ಪ್ರಯತ್ನಿಸುತ್ತಿದೆ ಮತ್ತು ಮುಸ್ಲೀಮರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಕೆಪಿಸಿಸಿಯ ವೀಕ್ಷಕ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಯಾರು ಬೇಕಾದರೂ ತಮ್ಮ ಉಮೇದುವಾರಿಕೆಯ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಟರು ನಿರ್ಧರಿಸುವರು. ಧ್ವೇಷ ಭಾವನೆ ಮರೆತು ಪಕ್ಷ ಸೂಚಿಸಿ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಬೆಂಬಲಿಸಿ ಪಕ್ಷದ ಅಭ್ಯರ್ಥಿಯ ಜಯಕ್ಕೆ ಶ್ರಮಿಸಬೇಕು. ಈಗಿನ ಯುವ ಮತದಾರರು ಪ್ರಜ್ಞಾವಂತರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಜಯ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಎಸ್‌.ಯಾಸ್ಮೀನ್‌ ತಾಜ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಾಜಿ ಶಾಸಕ ವಿ.ಮುನಿಯಪ್ಪ ಅವರನ್ನು ಕ್ಷೇತ್ರದ ಅಭ್ಯರ್ಥಿ ಮಾಡುವಂತೆ ಕೋರಿ ಕೆಪಿಸಿಸಿಯ ವೀಕ್ಷಕರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ವಿ.ಮುನಿಯಪ್ಪ ಸಹ ತಮ್ಮ ಉಮೇದುವಾರಿಕೆಯ ಅರ್ಜಿಯನ್ನು ವೀಕ್ಷಕರಿಗೆ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿರ್ಮಲಾ ಮುನಿರಾಜು, ಸತೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಶಶಿಧರ್‌, ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇಗೌಡ, ಕೆ.ಗುಡಿಯಪ್ಪ, ಸುಬ್ರಮಣಿ, ಎಸ್‌.ಎಂ.ನಾರಾಯಣಸ್ವಾಮಿ, ಬಿ.ವಿ.ಮುನೇಗೌಡ, ಎಚ್‌.ಎಂ.ಮುನಿಯಪ್ಪ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಉದಯಶಂಕರ್‌, ಕಾರ್ತಿಕ್‌, ಡಿ.ವಿ.ವೆಂಕಟೇಶ್‌, ರಘುನಾಥರೆಡ್ಡಿ ಹಾಜರಿದ್ದರು.
ವೀಕ್ಷಕರು ಬೇರಯವರಿಂದ ಅರ್ಜಿ ಪಡೆಯದಂತೆ ವಿ.ಮುನಿಯಪ್ಪ ಬೆಂಬಲಿಗರಿಂದ ತಡೆ
ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ವಿ.ಮುನಿಯಪ್ಪ ಅವರ ವಿರುದ್ಧ ಪಕ್ಷದಲ್ಲಿ ಈವರೆಗೂ ಬಂಡಾಯ ಅಭ್ಯರ್ಥಿಯಾಗಿ ಯಾರೂ ನಿಂತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಬಯಸಿ ವೀಕ್ಷಕರಿಗೆ ನೀಡಲು ಬಂದಿದ್ದರು. ಪೊಲೀಸರು ಘರ್ಷಣೆ ನಡೆಯಬಹುದೆಂದು ಅವರನ್ನು ಕಾಂಗ್ರೆಸ್‌ ಭವನಕ್ಕೆ ಹೋಗಲು ಬಿಡದೆ ನಗರಸಭೆಯ ನಿವೇಶನದಲ್ಲಿ ಇರುವಂತೆ ತಿಳಿಸಿದ್ದರು. ಯಾವುದೇ ಕಾರಣಕ್ಕೂ ವೀಕ್ಷಕರಿಗೆ ಆಂಜಿನಪ್ಪ ತಮ್ಮ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ವಿ.ಮುನಿಯಪ್ಪ ಬೆಂಬಲಿಗರು ಕಾದಿದ್ದರು. ಕಾಂಗ್ರೆಸ್‌ ಭವನದಿಂದ ಹೊರಟು ಆಂಜಿನಪ್ಪ ಇರುವ ಸ್ಥಳಕ್ಕೆ ಬರಲು ವೀಕ್ಷಕರ ವಾಹನ ಪ್ರಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ವೀಕ್ಷಕರು ಇಳಿಯಲು ಬಿಡದೆ ಸಾಗಹಾಕಿದರು.