Home News ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆ

ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆ

0

ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆಯಲ್ಲದೆ ಅವಶ್ಯಕವೂ ಕೂಡ. ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿ ಹಂತದಲ್ಲೂ ಕಾನೂನು ಅವಶ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್ ಅರಸ್ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ನೆರವು-ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರನ್ನು ತಾಯಿ, ದೇವತೆಯ ಸ್ಥಾನದಲ್ಲಿನೋಡುವ ನಮ್ಮ ಸಮಾಜದಲ್ಲಿ ಅತ್ಯಾಚಾರ ನಡೆಯುವುದು ಇಡೀ ಸಮಾಜವೇ ತಲೆ ತಗ್ಗಿಸುವಂತ ವಿಚಾರ. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ಪಾಲಿಸಬೇಕು. ಆಗಲೇ ಸಮಾಜದಲ್ಲಿ ಎಲ್ಲರು ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮಗುವನ್ನು ಶಾಲೆಗೆ ಸೇರಿಸಲು ಕಾನೂನು ಪಾಲನೆ, ಕಡ್ಡಾಯ ಶಿಕ್ಷಣ ಹಕ್ಕು, ವಸ್ತುವೊಂದನ್ನು ಮಾರುಕಟ್ಟೆಯಲ್ಲಿ ಖರೀಸಿದಾಗ ವ್ಯತ್ಯಾಸವಾದಲ್ಲಿ ಗ್ರಾಹಕರ ಕಾಯಿದೆ, ಜಮೀನು, ಮನೆ, ನಿವೇಶನ ಖರೀದಿ ಮಾರಾಟಕ್ಕೆ ಭೂ ಕಾಯ್ದೆ ಇದೆ. ಹೀಗೆ ಪ್ರತಿಯೊಂದು ವಿಷಯಕ್ಕೂ ಸಂಬಂಸಿದಂತೆ ನಮ್ಮಲ್ಲಿ ಕಾನೂನು ಇದ್ದು ಅದು ಕಾಲ ಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿಯಾಗುತ್ತಾ ಬಂದಿದೆ. ಎಲ್ಲರೂ ಕಾನೂನನ್ನು ತಿಳಿದುಕೊಂಡು ಪಾಲಿಸಿ ಎಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಧರ್ಮ, ಸಾಮಾಜಿಕ ಸ್ಥಿತಿಗತಿ, ಭೌಗೋಳಿಕ ವ್ಯವಸ್ಥೆಯನ್ನು ಆಧರಿಸಿಯೆ ಕಾನೂನುಗಳು ರೂಪುಗೊಂಡಿವೆ. ಯಾರು ಕಾನೂನನ್ನು ಗೌರವಿಸಿ ಪಾಲಿಸುತ್ತಾರೋ ಅವರನ್ನು ಕಾನೂನು ಕಾಪಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಂದ ಹಿಡಿದು ಮುದುಕರವರೆಗೂ ಭಾಷೆ, ಗಡಿ, ಜಾತಿ, ಧರ್ಮದ ಅಂತರವಿಲ್ಲದೆ ಎಲ್ಲರೂ ಕಾನೂನುಗಳನ್ನು ತಿಳಿದು ಜೀವನದಲ್ಲಿ ಕಾನೂನು ಚೌಕಟ್ಟಿನೊಳಗೆ ಜೀವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಪೋಸ್ಕೋ ಕಾಯಿದೆ ಕುರಿತು ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್ ಉಪನ್ಯಾಸ ನೀಡಿದರೆ, ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಮೋಟಾರ್ ವಾಹನ ಕಾಯಿದೆ ಕುರಿತು ವಕೀಲ ಎಂ.ಬಿ.ಲೊಕೇಶ್ ಉಪನ್ಯಾಸ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಶಾಲೆಯ ಮುಖ್ಯೋಪಾದ್ಯಾಯ ಟಿ.ಎ.ಸಿದ್ದೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.