Home News ಕಾಮಗಾರಿ ವಿಚಾರದಲ್ಲಿ ಸದ್ಯರಿಗೆ ಮಾಹಿತಿ ಕೊರತೆ

ಕಾಮಗಾರಿ ವಿಚಾರದಲ್ಲಿ ಸದ್ಯರಿಗೆ ಮಾಹಿತಿ ಕೊರತೆ

0

ಎಲ್ಲಿ ಕಾಮಗಾರಿಯಾಗುತ್ತಿದೆ, ಕಾಮಗಾರಿಯ ಗುಣಮಟ್ಟ ಹೇಗಿದೆ, ಯಾರು ಮಾಡುತ್ತಿದ್ದಾರೆ ಎಂಬುದರ ಮಾಹಿತಿಯೆ ಸಿಗುತ್ತಿಲ್ಲ, ಈ ವಿಚಾರಗಳಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಏಕಪಕ್ಷೀಯವಾದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕಪಡಿಸಿದ ಘಟನೆ ಮಂಗಳವಾರ ನಡೆಯಿತು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ತಾಲ್ಲೂಕು ಪಂಚಾಯಿತಿಗೆ ಬರುತ್ತಿರುವ ಅನುದಾನಗಳನ್ನು ಕ್ಷೇತ್ರವಾರು ಹಂಚಿಕೆ ಮಾಡಬೇಕು. ನಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಅತಿ ಜರೂರಾಗಿ ಆಗಬೇಕಾಗಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿಸಿಕೊಳ್ಳಲು ನಮಗೂ ಹಕ್ಕಿದೆ. ಅದನ್ನು ಬಿಟ್ಟು ಏಕಪಕ್ಷೀಯವಾಗಿ ಕಾಮಗಾರಿಗಳನ್ನು ಮಾಡುವುದು ಸರಿಯಲ್ಲವೆಂದು ಕಾಂಗ್ರೆಸ್‌ನ ಸದಸ್ಯರಾದ ನಾಗರಾಜು, ನರಸಿಂಹಪ್ಪ, ಪಂಕಜ ನಿರಂಜನ್, ಶೋಭ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅವರು, ಎಲ್ಲೆಲ್ಲಿ ಕಾಮಗಾರಿಗಳ ಅಗತ್ಯವಿದೆಯೋ ಅಂತಹ ಕಡೆಗಳಲ್ಲೆ ಕಾಮಗಾರಿ ಮಾಡುತ್ತಿದ್ದೇವೆ. ಈ ಬಗ್ಗೆ ಯಾರಿಗೂ ಮಾಹಿತಿ ಕೊಡುವ ಅಗತ್ಯವಿಲ್ಲವೆಂದಾಗ ಕೆಲಕಾಲ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು, ಈ ಮಧ್ಯೆ ಸದಸ್ಯರ ಪ್ರಶ್ನೆಗೆ ಉತ್ತರ ಕೊಡಲು ಎದ್ದು ನಿಂತ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಎಇಇ ಶಿವಾನಂದ ಅವರು, ಸದಸ್ಯರುಗಳ ಆಪ್ತರೇ ಎಲ್ಲಾ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಅವರಿಗೆ ವಿಚಾರ ಗೊತ್ತಿರಲ್ಲವಾ? ಎಂದು ಪ್ರಶ್ನಿಸುತ್ತಿದ್ದಂತೆ ನಿಮಗೆ ಮಾತನಾಡಲು ಬರುವುದಿಲ್ಲ ಕುಳಿತುಕೊಳ್ಳಿ, ಸಭೆಗೆ ಹೇಗೆ ಉತ್ತರ ಕೊಡಬೇಕು ಅನ್ನೋದೆ ಗೊತ್ತಿಲ್ಲವೆಂದು ಅಧಿಕಾರಿಯ ವಿರುದ್ಧ ಸದಸ್ಯರು ತಿರುಗಿಬಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಕೇಶವಮೂರ್ತಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಸಮಗ್ರವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯವಾಗಿರುವ ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಿರುವ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರುಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವಡೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಬತ್ತಿಹೋಗಿರುವ ಕೊಳವೆಬಾವಿಗಳಲ್ಲಿನ ಪಂಪು ಮೋಟಾರುಗಳನ್ನು ತೆಗೆದು ನೂತನವಾಗಿ ಕೊರೆಯುವ ಕೊಳವೆಬಾವಿಗಳಿಗೆ ಅಳವಡಿಸಿದರೆ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತದೆ. ಯಾವ ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ಟಾಕ್ ರಿಜಿಸ್ಟರ್ ಇಟ್ಟಿಲ್ಲ, ಪಂಪು ಮೋಟಾರುಗಳು, ಕೇಬಲ್, ಪೈಪುಗಳು ಏನಾಗುತ್ತಿವೆ ಎಂಬುದರ ಬಗ್ಗೆ ಮಾಹಿತಿ ಬಂದಿಲ್ಲವೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ನಾಗರಿಕರು ಪಡಿತರ ಚೀಟಿಗಳಿಗಾಗಿ ತಮ್ಮ ಮೊಬೈಲ್‌ಗಳ ಮೂಲಕವೇ ಅರ್ಜಿ ಸಲ್ಲಿಸಬಹುದು, ಗ್ರಾಮ ಪಂಚಾಯಿತಿ, ಆಹಾರ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ ನಂತರ ಆಯುಕ್ತರ ಲಾಗಿನ್‌ಗೆ ಕಳುಹಿಸಿಕೊಡುತ್ತೇವೆ. ೭ ದಿನಗಳಲ್ಲಿ ಪೋಸ್ಟ್ ಮೂಲಕ ಪಡಿತರ ಚೀಟಿ ಆಧಾರ್ ಕಾರ್ಡ್ ಮಾದರಿಯಲ್ಲಿ ಮನೆ ಬಾಗಿಲಿಗೆ ಬರಲಿದೆ ಎಂದು ಆಹಾರ ನಿರೀಕ್ಷಕ ಪ್ರಕಾಶ್ ಉತ್ತರಿಸಿದರು.
ತಾಲ್ಲೂಕಿನಲ್ಲಿ ಕಾಲುಬಾಯಿ ಜ್ವರ ಹರಡದಂತೆ ಅಗತ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಂತೆಗಳಿಂದ ತರುತ್ತಿರುವ ರಾಸುಗಳಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು ನಿಗಾವಹಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ೧೦ ರಾಸುಗಳು ೨ ಕರುಗಳು ಮೃತಪಟ್ಟಿವೆ. ೭ ರಿಂದ ೧೨ ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಮಾಡುತ್ತೇವೆ ಎಂದು ಪಶುವೈದ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಬರಗಾಲದಿಂದಾಗಿ ೧೦೦ ರಿಂದ ೧೫೦ ದಿನಗಳಿಗೆ ಏರಿಕೆ ಮಾಡಲಾಗಿದೆ. ಏಪ್ರಿಲ್ ೧ ರಿಂದ ನರೇಗಾ ಯೋಜನೆಯಡಿ ಒಬ್ಬ ಫಲಾನುಭವಿಗೆ ದಿನಕ್ಕೆ ೨೩೬ ರೂ ಸಿಗಲಿದೆ. ಎಂ.ಎ.ವೈ. ಯೋಜನೆಯಡಿಯಲ್ಲಿ ೨೦೭ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ನರೇಗಾ ಯೋಜನಾ ನಿರ್ದೇಶಕ ಶ್ರೀನಾಥ್‌ಗೌಡ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನರೇಗಾ ಯೋಜನಾಧಿಕಾರಿ ಶ್ರೀನಾಥ್‌ಗೌಡ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು

error: Content is protected !!