ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದ ಸರ್ಕಾರಿ ಶಾಲಾ ಆವರಣದ ವಿಶ್ವೇಶ್ವರಯ್ಯ ರಂಗಮಂದಿರದಲ್ಲಿ “ಜೈಹಿಂದ್ ಯೋಧ ನಮನ ಬಳಗ” ಆಯೋಜಿಸಿದ್ದ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಗಿಲ್ ಯೋಧ ಬಂಗಾರಪೇಟೆಯ ಶ್ರೀನಿವಾಸ್ ಮಾತನಾಡಿದರು.
ಯೋಧರ ಕುಟುಂಬದವರಿಗೆ ನನ್ನ ದೊಡ್ಡ ಸೆಲ್ಯೂಟ್. ತಮ್ಮ ಮಕ್ಕಳನ್ನು ದೇಶರಕ್ಷಣೆಗಾಗಿ ಕಳುಹಿಸಿರುವ ತಾಯಂದಿರು ಹಾಗೂ ಕುಟುಂಬದ ತ್ಯಾಗವನ್ನೂ ಮರೆಯಬಾರದು ಎಂದು ಅವರು ತಿಳಿಸಿದರು.
20 ವರ್ಷಗಳ ಹಿಂದೆ ಕಾರ್ಗಿಲ್ನಲ್ಲಿ ಶತ್ರು ಪಾಳಯವನ್ನು ಸದೆಬಡಿದಿದ್ದೆವು. ಈ ಯುದ್ಧದಲ್ಲಿ ಅನೇಕ ಸೈನಿಕರು ಪ್ರಾಣತ್ಯಾಗ ಮಾಡಿದ್ದರು. ಅವರ ಬಲಿದಾನವನ್ನು ಸ್ಮರಿಸಿಕೊಳ್ಳುವ ಸಲುವಾಗಿ ಈ ದಿನದಂದು ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವ ದಿವಸ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಕುಟುಂಬಕ್ಕೂ ನಾವು ಗೌರವವನ್ನು ಸಲ್ಲಿಸಬೇಕು ಎಂದರು.
ಕಾರ್ಗಿಲ್ ಯೋಧ ಕೋಲಾರದ ಸೋಮಣ್ಣ ಮಾತನಾಡಿ, ಜೆ.ವೆಂಕಟಾಪುರ ಗ್ರಾಮದ “ಜೈಹಿಂದ್ ಯೋಧ ನಮನ ಬಳಗ”ದ ಸದಸ್ಯರಿಗೆ ಯೋಧರೆಂದರೆ ಆತ್ಮೀಯತೆ, ಪ್ರೀತಿ, ಗೌರವ ಮತ್ತು ಆದರ. ವಿಮಾನ ನಿಲ್ದಾಣ ಅಥವಾ ರೈಲಿನಲ್ಲಿ ಬಂದಿಳಿಯುವ ಸೈನಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯ ಮಳೆ ಸುರಿಸುತ್ತಾರೆ. ಯೋಧರಿಗೆ ಇವರ ಪ್ರೀತ್ಯಾದರದಿಂದ ತಮ್ಮ ನೋವು, ಕಷ್ಟ, ದುಗುಡ, ಆತಂಕ ಮಾಯವಾಗುತ್ತದೆ. ಇನ್ನಷ್ಟು ದೇಶಸೇವೆ ಮಾಡಲು ಹುಮ್ಮಸ್ಸು ಬರುತ್ತದೆ. ಈ ದಿನ ಹದಿನೇಳು ಮಂದಿ ಯೋಧರನ್ನು ಕರೆಸಿ ಆತ್ಮೀಯವಾಗಿ ಗೌರವಿಸಿದ್ದಾರೆ ಎಂದರು.
ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ಚಿಕ್ಕವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಬೇಕು. ದೇಶಕ್ಕೆ ಎರಡು ರೀತಿಯ ಶತೃಗಳಿರುತ್ತಾರೆ. ಗಡಿಯಲ್ಲಿ ತೊಂದರೆ ಕೊಡುವವರು ಹಾಗೂ ದೇಶದೊಳಗೆ ಭಯೋತ್ಪಾದನೆ ಹುಟ್ಟುಹಾಕುವವರು. ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಸ್ಥಳೀಯರೇ ಗುರುತಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ಪ್ರತಿಯೊಬ್ಬರೂ ದೇಶರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕು. ಸೇನೆಯಲ್ಲಿ ಶಿಸ್ತು ನಮ್ಮ ಜೀವಾಳ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಯೋಧರಾದ ಬಾದಮಿ ಶಿವಣ್ಣ, ಬಂಗಾರಪೇಟೆ ಶ್ರೀನಿವಾಸ್, ಜಂಗಮಕೋಟೆ ಅರುಣ್, ಶ್ರೀನಿವಾಸಪುರ ಸುರೇಶ್, ಕುರುಬರಹಳ್ಳಿ ರವಿಭೀಮಣ್ಣ, ಬೆಂಗಳೂರು ನಿತೇಶ್, ರವಿನಾಯಕ್, ಶ್ರೀನಿವಾಸಪುರ ಸುರೇಶ್, ಬೂದಿಗೆರೆ ಮುರಳಿ, ಮಂಜುನಾಥ್, ಕೊಡಗಿನ ಕುಶಾಲಪ್ಪ, ಜಾತವಾರ ಚಂದ್ರಶೇಖರ್, ಭಾಷಾ, ರವಿ, ಸೋಮಣ್ಣ, ವಿಶ್ವನಾಥ್ ಅವರನ್ನು ಕಾರ್ಯಕ್ರಮಕ್ಕೆ ಜೆ.ವೆಂಕಟಾಪುರ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಹೂವನ್ನು ಚೆಲ್ಲಿ ಯೋಧರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಜಯಪುರದ ಸೇವಾಭಾರತಿ ಸದಸ್ಯರು ನೀರಿನ ವ್ಯವಸ್ಥೆ ಮಾಡಿದ್ದರೆ, ಸಯ್ಯದ್ ಜಾವೀದ್ ಶಾಮಿಯಾನಾ ಮತ್ತಿತರ ವ್ಯವಸ್ಥೆ ಮಾಡಿದ್ದರು.
ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್, ಸದಸ್ಯರಾದ ಮಿತ್ತನಹಳ್ಳಿ ಹರೀಶ್, ಎನ್..ನಾಗೇಶ್, ವಿಜಯಕುಮಾರ್, ಮುಕುಂದರಾಧಾ ರಮೇಶ್, ಸುರೇಶ್, ಮುನೇಗೌಡ, ಪುನೀತ್ ಕುಮಾರ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಲಕ್ಷ್ಮೀನಾರಾಯಣ, ಪ್ರಶಾಂತ್ ರಾಮಸ್ವಾಮಿ, ಮುಖ್ಯ ಶಿಕ್ಷಕಿ ಗೀತಾ, ಪಶುವೈದ್ಯಾಧಿಕಾರಿ ಅರುಣ್, ಜೈಹಿಂದ್ ಯೋಧ ನಮನ ಬಳಗದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.