ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಿವಾಲಯಗಳಲ್ಲಿ ವಿಶೇಷ ಅಲಂಕಾರ ಸಂಭ್ರಮದಿಂದ ನೆರವೇರಿದವು. ತಾಲ್ಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಸೋಮವಾರ ಸಂಜೆ ವಿಶೇಷ ಪೂಜೆಗಳು ಹಾಗೂ ದೀಪದಾರತಿಗಳನ್ನು ನಡೆಸಲಾಯಿತು.
ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಾಲಯಗಳ ಆವರಣವೆಲ್ಲಾ ಸಾಲು-ಸಾಲು ದೀಪಗಳ ವಿನ್ಯಾಸದಿಂದ ಕೂಡಿದ್ದು, ಮುಸ್ಸಂಜೆಯ ಆ ದಿವ್ಯ ಸಹವಾಸ ದೇವಾನು ದೇವತೆಗಳ ಅನುಗ್ರಹಕ್ಕೆಂದು ಮಹಿಳೆಯರು ಶ್ರದ್ಧೆಯಿಂದ ದೀಪಗಳನ್ನು ಹಚ್ಚುತ್ತಿದ್ದರು.
ಪಟ್ಟಣದ ಕೋಟೆ ವೃತ್ತದ ಸೋಮೇಶ್ವರ ಸ್ವಾಮಿ ದೇವಾಲಯ, ಬೂದಾಳ ಗ್ರಾಮದ ಮಲೆ ಮಲ್ಲೇಶ್ವರ ಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯ, ಚೌಡಸಂದ್ರ ಗ್ರಾಮದ ಸೋಮೇಶ್ವರಸ್ವಾಮಿ ದೇವಸ್ಥಾನ ಮುಂತಾದೆಡೆ ವಿಶೇಷ ಪೂಜೆಗಳು ನಡೆದವು.
ಕಡೆಯ ಕಾರ್ತಿಕ ಸೋಮವಾರವಾದ್ದರಿಂದ ದೇವಾಲಯಗಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳಿಗೆ ದೇವಾಲಯ ಸೇರಿದಂತೆ ವೈಯಕ್ತಿಕವಾಗಿ ಕೆಲ ಭಕ್ತರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು.