ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಮಾಹಿತಿಯನ್ನು ತಿಳಿದಿರಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ನಿರೀಕ್ಷಕ ಸಿದ್ದಪ್ಪ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ವತಿಯಿಂದ ಗುರುವಾರ ಆಯೋಜನೆ ಮಾಡಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಬಹಳಷ್ಟು ಮಂದಿ ಕಾರ್ಮಿಕರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ಕೂಲಿ ಪಡೆಯುವಂತಹ ಹಕ್ಕು ಕಾರ್ಮಿಕರಿಗೆ ಇದೆ. ಕಾರ್ಮಿಕರ ಕಾಯಿದೆಯಡಿ ನೋಂದಾವಣಿ ಮಾಡಿಕೊಂಡರೆ, ಕಟ್ಟಡ ಕಾರ್ಮಿಕರಿಗೆ ಆಗುವಂತಹ ದುರಂತಗಳಿಗೆ ೨ ಲಕ್ಷದವರೆಗೂ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಮಹಿಳಾ ಕಾರ್ಮಿಕರ ರಕ್ಷಣೆ ಮಾಡುವುದು ಅವರ ಆರೋಗ್ಯ ರಕ್ಷಣೆ ಮಾಡುವುದು ಕಾರ್ಮಿಕರು ಕೆಲಸ ಮಾಡುವ ಕಂಪನಿಗಳ ಹೊಣೆಗಾರಿಕೆಯಾಗುತ್ತದೆ. ಮಹಿಳಾ ಕಾರ್ಮಿಕರು ಕೆಲಸ ಮಾಡುವ ಕಡೆಗಳಲ್ಲಿ ಅವರ ಮಕ್ಕಳ ಪೋಷಣೆಗೆ ಶಿಶುವಿಹಾರಗಳನ್ನು ತೆರೆಯಬೇಕು, ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ೫ ವರ್ಷಗಳು ಪೂರೈಸಿದ ನಂತರ ಕಂಪನಿಗೆ ರಾಜೀನಾಮೆ ನೀಡಿದರೆ, ಅಂತಹವರಿಗೆ ವಾರ್ಷಿಕ ೧೫ ದಿನಗಳಂತೆ ಲೆಕ್ಕ ಮಾಡಿ ಪರಿಹಾರಧನ ನೀಡಬೇಕಾಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಕ್ಕಳಿಗೆ ವಿದ್ಯಾರ್ಥಿವೇತನಗಳನ್ನು ಪಡೆಯುವಂತಹ ಅವಕಾಶಗಳಿವೆ. ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಂತಹವರಿಗೆ ಮಾಸಿಕವಾಗಿ ಐದು ಸಾವಿರ ರೂ ಮಾಶಾಸನ ಪಡೆಯಲು ಅರ್ಹರಾಗಿರುತ್ತಾರೆ.
ಖಾಸಗಿ ವಾಣಿಜ್ಯ ವಾಹನಗಳ ಚಾಲಕರಿಗೂ ಕೂಡಾ ಅನೇಕ ಸೌಲಭ್ಯಗಳಿದ್ದು, ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್‌ಸಿಂಗ್ ಮಾತನಾಡಿ, ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಬೆಳೆಸುವುದರ ಜೊತೆಗೆ ಅವರಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಬೇಕು. ಕಾರ್ಮಿಕರ ಹಕ್ಕುಗಳಿಗೆ ದಕ್ಕೆಯಾದಂತಹ ಸಂದರ್ಭದಲ್ಲಿ ಸಂಘಟನೆ ನಿರಂತರವಾಗಿ ಹೋರಾಟ ಮಾಡಲಿದೆ. ಕಾರ್ಮಿಕರು ಸಂಘಟಕರಾದರೆ ಮಾತ್ರವೇ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಕೀಲ ಮುನಿರಾಜು ಮಾತನಾಡಿ, ಕಾರ್ಮಿಕರು ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದಷ್ಟೆ ಅಲ್ಲದೆ, ಕಾನೂನಿನಲ್ಲಿ ಅವರಿಗೆ ರಕ್ಷಣೆ ಇದೆ. ಉಚಿತವಾಗಿ ಸಮಾಲೋಚನೆ ನಡೆಸುವಂತಹ ಅವಕಾಶಗಳಿವೆ. ಇಂತಹ ಎಲ್ಲಾ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮಹಿಳಾ ಕಾರ್ಮಿಕರು ಸೇರಿದಂತೆ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳನ್ನು ನಡೆಯುತ್ತಲೇ ಇವೆ. ಇಂತಹ ದೌರ್ಜನ್ಯ ದಬ್ಬಾಳಿಕೆಗಳನ್ನು ನಿಯಂತ್ರಣ ಮಾಡಬೇಕು. ಇಂತಹ ಜಾಗೃತಿ ಸಭೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಆನಂದಪ್ಪ, ಮುನಿಕೃಷ್ಣಪ್ಪ, ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕ ವಿಶ್ವನಾಥ್, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಜಿಲ್ಲಾ ಅಧ್ಯಕ್ಷ ಜಾತವಾರ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಪ್ರದೀಪ್, ಮಂಜುನಾಥ್, ಪ್ರಭಾಕರ್, ಮಹಿಳಾ ಸಂಚಾಲಕಿ ಉಷಾ, ಆನೇಕಲ್ ಮಂಜುನಾಥ್, ಸಿ.ಕೆ.ಪ್ರತಾಪ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -