Home News ಕಾಲುವೆಗಳನ್ನು ಸರಿಪಡಿಸಲು ಒತ್ತುವರಿ ತೆರವು ಕಾರ್ಯಾಚರಣೆ

ಕಾಲುವೆಗಳನ್ನು ಸರಿಪಡಿಸಲು ಒತ್ತುವರಿ ತೆರವು ಕಾರ್ಯಾಚರಣೆ

0

ಹಲವು ವರ್ಷಗಳಿಂದ ಕಾಲುವೆಗಳ ಮೇಲೆ ನಿರ್ಮಿಸಿಕೊಂಡಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ರಸ್ತೆಯ ಎರಡೂ ಬದಿ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೀಟ್ ಗಳನ್ನು ತೆರವುಗೊಳಿಸುವ ಕಾಮಗಾರಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಶುಕ್ರವಾರ ಸಂಜೆ ಬಿದ್ದ ಧಾರಾಕಾರ ಮಳೆಯಿಂದಾಗಿ ನೀರು ತಗ್ಗಿನಲ್ಲಿರುವ ಅಂಗಡಿ ಹಾಗೂ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದಕ್ಕೆಲ್ಲಾ ಕಾರಣ ಕಾಲುವೆಗಳು ಮುಚ್ಚಿಹೋಗಿರುವುದೇ ಆಗಿದೆ. ನೀರು ಹರಿಯಬೇಕಾದ ಕಾಲುವೆಗಳ ಮೇಲೆ ಅನಧಿಕೃತ ನಿರ್ಮಾಣಗಳು, ಶೀಟ್ ಹೊದಿಕೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದೇವೆ. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿ ಬಳಸಿ ಕಾಲುವೆಗಳಲ್ಲಿ ತುಂಬಿದ್ದ ಕಸ, ತ್ಯಾಜ್ಯವನ್ನು ತೆಗೆದು ಹಾಕಲಾಗುತ್ತಿದೆ ಎಂದು ಹೇಳಿದರು.

ಶಿಡ್ಲಘಟ್ಟದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಕಾಲುವೆಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೀಟ್ ಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ತಾಲ್ಲೂಕು ಆಡಳಿತ ಮತ್ತು ನಗರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ನಡೆಸಿದರು.

ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಈ ಹಿಂದೆಯೇ ತಹಶೀಲ್ದಾರ್ ಅವರು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಿದ್ದರು. ಅದರಂತೆಯೇ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ಈ ಕೆಲಸವನ್ನು ನಗರಸಭೆಯ ವತಿಯಿಂದ ಮಾಡಬೇಕಿತ್ತು. ಆದರೆ ತಹಶೀಲ್ದಾರ್ ಅವರೇ ಖುದ್ದಾಗಿ ಸ್ಥಳದಲ್ಲಿದ್ದು ಕಾಲವುಗಳನ್ನು ತೆರವು ಮಾಡಿಸುತ್ತಿದ್ದಾರೆ. ಅವರಿಗೆ ನಗರಸಭೆಯಿಂದ ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದೇವೆ. ನಗರದಲ್ಲಿರುವ ಎಲ್ಲಾ ಪೋಷಕ ಕಾಲುವೆಗಳನ್ನು ಸಹ ನೀರು ಹರಿದು ಹೋಗುವಂತೆ ಸರಿಪಡಿಸಲಾಗುವುದು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್, ಎಸ್ ಐ ಗಳಾದ ನವೀನ್, ಪ್ರದೀಪ್ ಪೂಜಾರಿ, ವಿಜಯ್ ರೆಡ್ಡಿ, ನಗರಸಭೆ ಅಧಿಕಾರಿಗಳಾದ ದಿಲೀಪ್, ಸವಿತಾ, ಸಹಿದಾ, ಮುರಳಿ, ಗಂಗಾಧರ್ ಹಾಜರಿದ್ದರು.
ಅಂಗಡಿ ಮಾಲೀಕರ ಆಕ್ರೋಶ: ಏಕಾಏಕಿ ತಾಲ್ಲೂಕು ಆಡಳಿತ ಹಾಗೂ ನಗರಸಭೆಯವರು ತೆರವು ಕಾರ್ಯಾಚರಣೆ ಕೈಗೊಂಡಿದ್ದರಿಂದ ವಿಚಲಿತರಾದ ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಕೆಲ ಕಾಲ ವಿರೋಧ ವ್ಯಕ್ತಪಡಿಸಿದರು. ಯಾವುದೇ ನೋಟಿಸ್ ನೀಡದೆ ಜೆಸಿಬಿ ತಂದು ಅಂಗಡಿಗಳ ಮುಂಭಾಗದಲ್ಲಿದ್ದ ಶೀಟ್ ಗಳನ್ನು ತೆರವು ಮಾಡಿರುವುದು ಖಂಡನೀಯ. ಕನಿಷ್ಠ ಸೌಜನ್ಯಕ್ಕಾದರೂ ಕಾಲಾವಕಾಶ ನೀಡಬೇಕಿತ್ತು. ಈಗಾಗಲೇ ನಿನ್ನೆ ಬಿದ್ದ ಮಳೆಗೆ ನಷ್ಟವನ್ನು ಅನುಭವಿಸಿದ್ದೇವೆ. ಈಗ ವ್ಯಾಪಾರಕ್ಕೂ ತೊಂದರೆ ಮಾಡಿದ್ದಾರೆ ಎಂದು ವ್ಯಾಪಾರಸ್ಥ ಅಕ್ರಂಪಾಷ ಆಕ್ರೋಶ ವ್ಯಕ್ತಪಡಿಸಿದರು.