ದೇಶದ ಅಭಿವೃದ್ಧಿಗೆ ಶಿಕ್ಷಣ ಬಹುದೊಡ್ಡ ಮಾನದಂಡ ಎಂದು ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಡಶಾಲೆಯ ನೂತನ ಕೊಠಡಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಯುವಶಕ್ತಿ ಹೆಚ್ಚಾಗಿದ್ದು, ಅವರೆಲ್ಲ ವಿದ್ಯಾವಂತರಾದಾಗ ಮಾತ್ರ ದೇಶ ಮುಂದುವರೆಯಲು ಸಾದ್ಯ, ಶಿಕ್ಷಣಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂಗಳ ಯೋಜನೆಯನ್ನು ರೂಪಿಸುತ್ತಿದ್ದು, ಹೆಚ್ಚು ಹೆಚ್ಚಾಗಿ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ, ಸೈಕಲ್ ವಿತರಣೆ, ಸಮವಸ್ತ್ರಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. ಇಂದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದು ಮುಂದು ನೋಡುತ್ತಿದ್ದಾರೆ. ನಮ್ಮ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿ ಹೆಸರುವಾಸಿಯಾದ ಸರ್.ಎಂ ವಿಶ್ವೇಶ್ವರಯ್ಯ ಸಹ ಸರ್ಕಾರಿ ಶಾಲೆಯಲ್ಲಿ ಓದಿರುವುದನ್ನು ಮರೆಯಬಾರದೆಂದು ತಿಳಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರ ವಿದ್ಯಾಬ್ಯಾಸಕ್ಕಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳನ್ನು ತೆರೆದಿದೆ. ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ಚೆನ್ನಾಗಿ ಓದಿ ದೇಶಕ್ಕೆ ಕೀರ್ತಿ ತನ್ನಿ ಎಂದು ಕರೆನೀಡಿದರು.
ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ನಿರ್ಮಲ ಮುನಿರಾಜು, ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ,ಎಂ.ವೆಂಕಟೇಶ್, ಜಿಲ್ಲಾ ಪಂಚಾತಿಯಿ ಸದಸ್ಯ ಸತೀಶ್, ಮುಖಂಡರಾದ ಬಿ.ಪಿ ನಾಗರಾಜು, ಎಚ್,ಎಂ ನಾರಾಯಣಸ್ವಾಮಿ, ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಕೆ.ಪಿ ಮುನಿರೆಡ್ಡಿ, ಕೆ.ಪಿ.ವೆಂಟೇಶ್, ರಾಮಾಂಜಿನೆಯರೆಡ್ಡಿ, ದೊಣ್ಣಹಳ್ಳಿ ರಮೇಶ್, ಮುನೀಂದ್ರ, ಮತ್ತಿತತರು ಕಾರ್ಯಕ್ರಮದಲ್ಲಿ ಹಾಜರಿದ್ದರು.