Home News ಕುಡಿತ ಬಿಟ್ಟು ಕುರಿ ಸಾಕಾಣಿಕೆಗೆ ತೊಡಗಿದ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ

ಕುಡಿತ ಬಿಟ್ಟು ಕುರಿ ಸಾಕಾಣಿಕೆಗೆ ತೊಡಗಿದ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದ್ದರಿಂದ ಪ್ರತಿದಿನ ಕುಡಿಯುತ್ತಿದ್ದವರು, ಕುಡಿತ ಬಿಡಬೇಕಾಯಿತು. ಅದರಿಂದಾಗಿ ಉಳಿಸಿಟ್ಟ ಹಣದಲ್ಲಿ ಒಂದು ಕುರಿ ಮತ್ತು ಕುರಿಮರಿಯನ್ನು ಕೊಂಡು ತಂದಿದ್ದಾರೆ.

 ಕಳೆದ ಎರಡು ದಿನಗಳಿಂದ ಕುರಿಗಳಿಗೆ ಮೇವು ತಿನ್ನಿಸುತ್ತಾ ಅದರ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಮ್ಡಿರುವ ಚಿಕ್ಕಮುನಿಯಪ್ಪ, “ಎಣ್ಣೆ ಸಿಗದಂತಾದೊಡನೆ ಕೈಕಾಲು ಆಡಲಿಲ್ಲ. ಕೈಗಳು ಅದುರ ತೊಡಗಿದವು. ಏನು ಮಾಡಲೂ ತೋಚಲಿಲ್ಲ. ಕೂಲಿ ಕೆಲಸಕ್ಕೆ ಹೋಗತೊಡಗಿದೆ. ಮೊದಲಾದರೆ ಸಂಜೆಯಾದೊಡನೆ ಕುಡಿತಕ್ಕೆ ದುಡಿದ ಹಣವೆಲ್ಲಾ ಹೋಗುತ್ತಿತ್ತು. ಅದಿಲ್ಲದ್ದರಿಂದ ದುಡ್ಡೆಲ್ಲಾ ಜಮೆಯಾಗತೊಡಗಿತು. ಮೊನ್ನೆ ಹೋಗಿ 6,300 ರೂಗಳನ್ನು ಕೊಟ್ಟು ಒಂದು ಕುರಿ ಮತ್ತು ಒಂದು  ಕುರಿಮರಿಯನ್ನು ತಂದೆ. ಅವನ್ನು ಪೋಷಣೆ ಮಾಡುತ್ತಿರುವಾಗ ಒಂದು ರೀತಿಯ ಬಾಂಧವ್ಯ ಮೂಡಿದೆ. ಇನ್ನು ಮುಂದೆ ನಾನು ಕುಡಿಯುವುದಿಲ್ಲ, ಕುರಿಗಳನ್ನೇ ಸಾಕಿ, ಹತ್ತಾರು ಕುರಿಗಳನ್ನು ಅಭಿವೃದ್ಧಿ ಮಾಡಿ ಜೀವನ ಸಾಗಿಸುತ್ತೇನೆ. ಅದೇ ನನ್ನ ಗುರಿ” ಎಂದು ಚಿಕ್ಕಮುನಿಯಪ್ಪ ಹೇಳಿದರು.

 “ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟ ಇಲ್ಲದ ಕಾರಣ ಗ್ರಾಮಗಳಲ್ಲಿ ನೆಮ್ಮದಿ, ಶಾಂತಿ ಇತ್ತು. ಕುಡಿದು ಗಲಾಟೆ, ಜಗಳ ಮಾಡುತ್ತಿದ್ದವರು, ಸಾಲ ಕೇಳುವವರು ಇಲ್ಲವಾಗಿದ್ದರು. ಕುಡಿತದ ಚಟವಿದ್ದವರು ಮೂರು ಹೊತ್ತೂ ಚೆನ್ನಾಗಿ ತಿನ್ನುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಕೌಟುಂಬಿಕ ವಾತಾವರಣ ಸುಧಾರಿಸಿತ್ತು. ಕುಡಿತದ ಚಟವಿದ್ದ ಚಿಕ್ಕಮುನಿಯಪ್ಪ, ಉಳಿಸಿದ ಹಣದಲ್ಲಿ ಕುರಿಸಾಕಣಿಕೆದಾರನಾದುದು ಸಕಾರಾತ್ಮಕ ಬೆಳವಣಿಗೆ. ಇಂಥಹವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ” ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.

error: Content is protected !!