ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದೆ. ಇದೇ ಮೊದಲ ಭಾರಿಗೆ ೯ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಅಧ್ಯಕ್ಷ ಹಾಗು ಉಪಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲ ಇಡೀ ತಾಲ್ಲೂಕಿನ ಜನರಲ್ಲಿದೆ.
ತಾಲ್ಲೂಕು ಪಂಚಾಯತಿಯಲ್ಲಿ ಒಟ್ಟು ೧೭ ಸ್ಥಾನಗಳಿದ್ದು ೯ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ ಇನ್ನುಳಿದ ೮ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
ಅಧಿಕಾರ ಹಿಡಿಯಲು ಬೇಕಿರುವ ೯ ಸದಸ್ಯರ ಸಂಖ್ಯೆ ಜೆಡಿಎಸ್ ಹೊಂದಿದೆಯಾದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಲಾಭಿ ಮಾತ್ರ ಜೋರಾಗಿ ನಡೆಯುತ್ತಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಿರಿಸಲಾಗಿದೆ. ಮೀಸಲಾತಿ ಪ್ರಕಟವಾಗಿದ್ದೇ ತಡ ತಮ್ಮ ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆಯಾದರೂ, ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕರ ತೀರ್ಮಾನವೇ ಅಂತಿಮವಾಗಿದೆ.
ಪ್ರವಾಸ ಹೊರಟಿರುವ ಜೆಡಿಎಸ್ ಸದಸ್ಯರು :
ಜೆಡಿಎಸ್ ಪಕ್ಷದಿಂದ ಗೆಲುವು ಸಾದಿಸಿರುವ ೯ ಮಂದಿ ಸದಸ್ಯರೂ ಒಗ್ಗಟ್ಟಾಗಿದ್ದು, ಸದಸ್ಯರಲ್ಲಿ ಒಡಕು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬಹುದೆಂಬ ಶಂಕೆಯಿಂದ ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ೯ ಮಂದಿ ಸದಸ್ಯರನ್ನು ಪ್ರವಾಸ ಕಳುಹಿಸಲಾಗಿದೆ.
ಮಾಜಿ ಸಚಿವ ವಿ.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ಸಭೆ :
ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದ ತಾಲ್ಲೂಕು ಪಂಚಾಯತಿ ಇದೇ ಮೊದಲ ಭಾರಿಗೆ ಜೆಡಿಎಸ್ ವಶವಾಗಿರುವುದು ಕಾಂಗ್ರೆಸ್ನ ಹಿರಿಯ ಮುಖಂಡರೂ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶುಕ್ರವಾರ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಮ್ಮ ಪಕ್ಷದ ೮ ಸದಸ್ಯರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ ರಾಜಕೀಯ ತಂತ್ರ, ಪ್ರತಿತಂತ್ರಗಳನ್ನು ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಧಿಕಾರ ಹಿಡಿಯಲು ಕೇವಲ ಒಂದು ಸ್ಥಾನದ ಕೊರತೆಯಿದ್ದು ಮೇ ೧೬ ರ ಸೋಮವಾರದಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ನ ಯಾವುದೇ ಒಬ್ಬ ಸದಸ್ಯ ಗೈರು ಹಾಜರಾದರೆ ಅಥವಾ ವಿರೋಧಿಗಳು ಒಡ್ಡುವ ಆಮಿಷಗಳಿಗೆ ಒಳಗಾಗಿ ಪಕ್ಷ ವಿರೋಧಿಯಾಗಿ ಮತ ಚಲಾಯಿಸಿದ್ದೇ ಆದಲ್ಲಿ ತಮ್ಮದೇ ಅಭ್ಯರ್ಥಿ ಅಧ್ಯಕ್ಷನಾಗುತ್ತಾನೆ ಎಂಬ ಲೆಕ್ಕಾಚಾರದಲ್ಲಿ ಈಗಾಗಲೇ ಕೆಲ ಸದಸ್ಯರು ಗೌಪ್ಯ ಕಾರ್ಯತಂತ್ರಗಳನ್ನು ಮಾಡುತ್ತಿರುವುದು ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಬಳಿ ಚರ್ಚಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಧ್ಯಕ್ಷ ಹಾಗು ಉಪಾಧ್ಯಕ್ಷ ಆಕಾಂಕ್ಷಿಗಳು :
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ವಿ.ಮುನಿಯಪ್ಪರ ಸ್ವಗ್ರಾಮ ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ವಿಜೇತರಾಗಿರುವ ಜೆ.ಡಿ.ಎಸ್ ಪಕ್ಷದ ಕೆ.ಲಕ್ಷ್ಮಿನಾರಾಯಣ, ಬಶೆಟ್ಟಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದ ಬಿ.ವಿ.ನಾರಾಯಣಸ್ವಾಮಿ, ಚೀಮಂಗಲ ಕ್ಷೇತ್ರದ ರಾಜಶೇಖರ್ ಮತ್ತು ಭಕ್ತರಹಳ್ಳಿ ಕ್ಷೇತ್ರದಿಂದ ಜಯಗಳಿಸಿರುವ ಚಂದ್ರಕಲಾ ಬೈರೇಗೌಡ ಅವರು ಸಾಮಾನ್ಯ ಸ್ಥಾನದಿಂದ ಜಯಗಳಿಸಿದ್ದಾರೆ. ಈ ನಾಲ್ವರ ಪೈಕಿ ಯಾರು ಮೊದಲ ಅವಧಿಗೆ ಅಧ್ಯಕ್ಷರಾಗುತ್ತಾರೆ ಎನ್ನುವುದು ಮಾತ್ರ ಸೋಮವಾರ ತಿಳಿಯಲಿದೆ.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿದ್ದು ಈ ಪೈಕಿ ತುಮ್ಮನಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಜಯಗಳಿಸಿರುವ ಎಚ್.ನರಸಿಂಹಯ್ಯ, ಮೇಲೂರು ಕ್ಷೇತ್ರದಿಂದ ಜಯಗಳಿಸಿರುವ ಮುನಿಯಪ್ಪ, ಹಾಗೂ ಕುಂಬಿಗಾನಹಳ್ಳಿ ಕ್ಷೇತ್ರದಿಂದ ಜಯಗಳಿಸಿರುವ ಮುನಿನರಸಮ್ಮ ಪ್ರಮುಖರಾಗಿದ್ದಾರೆ.