Home News ಕುರಿಗಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆ

ಕುರಿಗಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆ

0

ಕುರಿ ಮಾಂಸ ಸೇರಿದಂತೆ ಕುರಿಯ ಎಲ್ಲ ಉತ್ಪನ್ನಗಳೂ ಸಹ ಬಳಕೆಯಲ್ಲಿದ್ದು ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಹಾಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕಾಣಿಕೆಯಲ್ಲಿ ತೊಡಗುವಂತೆ ರೈತರಿಗೆ ಕುರಿ ಮತ್ತು ಉಣ್ಣೆ ನಿಗಮದ ಜಿಲ್ಲಾ ಅಧಿಕಾರಿ ಮಧುರನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿ ಜಿ.ಕೆ.ಹೊಸೂರು ಗ್ರಾಮದಲ್ಲಿ ಶನಿವಾರ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಕುರಿಗಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುರಿ ಸಾಕಾಣಿಕೆಯನ್ನು ಬಹಳಷ್ಟು ರೈತರು ಮಾಡುತ್ತಾರಾದರೂ ಅದನ್ನು ಮುಖ್ಯ ಉದ್ದಿಮೆಯಾಗಿ ಕೈಗೊಂಡಿರುವ ರೈತರ ಸಂಖ್ಯೆ ಕಡಿಮೆ. ಅದರಲ್ಲೂ ಸಾಂಪ್ರದಾಯಿಕ ಪದ್ದತಿಯಲ್ಲಿ ಕುರಿ ಸಾಕಾಣಿಕೆ ಮಾಡುವುದೆ ಹೆಚ್ಚು. ಆದರೆ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ದಿನಗಳು ಕಳೆದಂತೆ ಕುರಿ ಮಾಂಸದ ಬೇಡಿಕೆ ಹಾಗೂ ಬೆಲೆ ಹೆಚ್ಚುತ್ತಲೆ ಇದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಕುರಿಯ ಉಣ್ಣೆಯಿಂದಲೂ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಅವುಗಳ ಬೇಡಿಕೆಯೂ ದಿನ ದಿನದಿಂದ ಹೆಚ್ಚುತ್ತಲೆ ಇದೆ. ಇದಕ್ಕೆ ಸರ್ಕಾರದಿಂದಲೂ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಹತ್ತು ಹಲವು ಯೋಜನೆಗಳ ಮೂಲಕ ಕುರಿ ಸಾಕಾಣಿಕೆ ಹಾಗೂ ಕುರಿಯ ಉಣ್ಣೆ ಉತ್ಪನ್ನಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತಿದೆ ಎಂದು ಹೇಳಿದರು.
ನಿಗಮದಿಂದ ಸಂಘಗಳಿಗೆ ಅಗತ್ಯವಿರುವ ತರಬೇತಿ ಕೇಂದ್ರಗಳನ್ನು ನಿರ್ಮಿಸಿ ಅಲ್ಲಿ ಉಣ್ಣೆಯಿಂದ ನಾನಾ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಾದ ತರಬೇತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ನಿಪುಣ ತರಬೇತಿದಾರರು, ಅಧಿಕಾರಿಗಳಿಂದ ಸೂಕ್ತ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು.
ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಬಳುವನಹಳ್ಳಿ ಲೊಕೇಶ್ ಗೌಡ ಮಾತನಾಡಿ, ಕೇಂದ್ರದ ಬೆಡ್ಪಾಲಕ್ ಯೋಜನೆಯಡಿ ಕುರಿಗಾರರು ಜೀವ ವಿಮೆ ಮಾಡಿಸಲು ಅವಕಾಶವಿದ್ದು ಈ ಯೋಜನೆಯಡಿ ಕುರಿಗಾರರು ವಾರ್ಷಿಕ ೮೦ರೂ.ಗಳ ವಿಮೆ ಹಣವನ್ನು ಪಾವತಿಸಬೇಕು. ಇಷ್ಟು ಹಣ ಪಾವತಿಸಿದರೆ ಭಾರತೀಯ ಜೀವ ವಿಮಾ ನಿಗಮವು(ಎಲ್ಐಸಿ)೧೦೦ ರೂಗಳನ್ನು ಹಾಗೂ ಕೇಂದ್ರೀಯ ಉಣ್ಣೆ ಅಭಿವೃದ್ಧಿ ಮಂಡಳಿಯು ೧೫೦ ರೂಗಳನ್ನು ವಿಮೆಗಾಗಿ ಹಣ ಸಂದಾಯ ಮಾಡುತ್ತದೆ.
ಈ ವಿಮೆ ಯೋಜನೆ ಮಾಡಿಸಿದ ಕುರಿಗಾರರು ಅಥವಾ ಅವರ ಕುಟುಂಬದವರು ಯಾರಾದರೂ ಸ್ವಾಭಾವಿಕ ಮರಣ ಹೊಂದಿದ್ದರೆ ೬೦,೦೦೦ ರೂ, ಅಪಘಾತ ಇನ್ನಿತರೆ ದುರ್ಘಟನೆಗಳಲ್ಲಿ ಎರಡು ಕೈಗಳು, ಎರಡೂ ಕಾಲುಗಳು ಅಥವಾ ಕಣ್ಣುಗಳು ಕಳೆದುಕೊಂಡಲ್ಲಿ ೧,೫೦,೦೦೦ ರೂಗಳನ್ನು, ಒಂದು ಕೈ ಅಥವಾ ಒಂದು ಕಾಲು ಅಥವಾ ಒಂದು ಕಣ್ಣು ಕಳೆದು ಕೊಂಡಲ್ಲಿ ೭೫,೦೦೦ ರೂ. ವಿಮೆ ಹಣ ಪರಿಹಾರವಾಗಿ ನೀಡಲಾಗುವುದು. ಜತೆಗೆ ಈ ಯೋಜನೆಯಡಿ ವಿಮೆ ಮಾಡಿಸಿದ ಕುರಿಗಾರರ ೬ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳಿಗೆ ವಾರ್ಷಿಕ ೧೮೦೦ ರೂಗಳನ್ನು ವಿದ್ಯಾರ್ಥಿ ವೇತನವನ್ನಾಗಿ ಭಾರತೀಯ ಜೀವ ವಿಮಾ ನಿಗಮದಿಂದ ನೀಡಲಾಗುತ್ತದೆ.
ಈ ರೀತಿಯ ಹತ್ತು ಹಲವು ಯೋಜನೆಗಳನ್ನು ಸರಕಾರ ಕುರಿಗಾಹಿಗಳಿಗಾಗಿ ಜಾರಿಗೊಳಿಸಿದ್ದು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ, ಗಂಜಿಗುಂಟೆ ವ್ಯಾಪ್ತಿಯ ಕುರಿ ಸಾಕಾಣಿಕೆದಾರರಿಗೆ ಉಚಿತ ಪಾಸ್ಬುಕ್, ಷೇರು ಪತ್ರ ಹಾಗೂ ಜಂತುನಾಶಕ ಔಷಗಳ ವಿತರಣೆಯನ್ನು ಮಾಡಲಾಯಿತು.
ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ, ಗಂಜಿಗುಂಟೆ ಪಶು ಆಸ್ಪತ್ರೆಯ ಡಾ.ಬಾಬು, ಪ್ರಗತಿಪರ ಕುರಿ ಸಾಕಾಣಿಕೆದಾರರ ಸಂಘದ ನಿರ್ದೆಶಕ ಸಿ.ರಾಮಣ್ಣ, ಡಾ.ರಾಮಕೃಷ್ಣಾರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಪ್ರಸನ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.