Home News ಕೃಷಿ ಅಭಿಯಾನ: ನಾನಾ ಇಲಾಖೆಗಳಿಂದ ವಸ್ತು ಪ್ರದರ್ಶನ

ಕೃಷಿ ಅಭಿಯಾನ: ನಾನಾ ಇಲಾಖೆಗಳಿಂದ ವಸ್ತು ಪ್ರದರ್ಶನ

0

ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ರೈತರು ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸಿಗುವ ಸವಲತ್ತು, ಯೋಜನೆಗಳ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ ಹಾಗೂ ಕೃಷಿ, ರೇಷ್ಮೆ, ತೋಟಗಾರಿಕೆ, ಪಶು ಸಂಗೋಪನೆ ಮುಂತಾದ ಇಲಾಖೆಗಳ ವಸ್ತು ಪ್ರದರ್ಶನ, ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ವಸ್ತು ಪ್ರದರ್ಶನದಲ್ಲಿ ಮಾಹಿತಿ ನೀಡಲಾಯಿತು

ಬಹಳಷ್ಟು ಯೋಜನೆಗಳ ಬಗ್ಗೆ ಅರಿವು ಇಲ್ಲದ ಕಾರಣ ಅನೇಕ ಮಂದಿ ರೈತರು ಹಲವಾರು ಯೋಜನೆ, ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅನುದಾನಗಳು ಮಧ್ಯವರ್ತಿಗಳ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆಗಳ ಬಗ್ಗೆ ಅರಿವು ಇದ್ದಾಗ ರೈತರು ಕಚೇರಿಗಳಿಗೆ ಬಂದು ಕಾನೂನು ಚೌಕಟ್ಟಿನಲ್ಲಿ ಯೋಜನೆ, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿಗಳಾದ ಡಾ.ಆನಂದ್, ಪಂಕಜ ಕೃಷಿ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೃಷಿ, ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಇಲಾಖೆಯ ವಸ್ತು ಪ್ರದರ್ಶನ, ಕೃಷಿಯ ಮಾಹಿತಿ ನೀಡುವ ರೈತ ರಥ ಗಮನ ಸೆಳೆಯಿತು.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ನಾನಾ ತರಕಾರಿ, ಹಣ್ಣು ಹಂಪಲು, ಸಿರಿ ದಾನ್ಯಗಳ ಪ್ರದರ್ಶನದ ಮಳಿಗೆಗಳಿಗೆ ಭೇಟಿ ನೀಡಿ ರೈತರು ಅವುಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
ಹೊಸಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾ ರವಿಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ಶಶಿಕುಮಾರ್, ಕೃಷಿ ಅಧಿಕಾರಿ ಮುರಳಿ, ಗೋಪಾಲರಾವ್, ಎಚ್‌.ಜಿ.ಗೋಪಾಲಗೌಡ ಹಾಜರಿದ್ದರು.
 
 

error: Content is protected !!