Home News ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡಬಾರದು

ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡಬಾರದು

0

ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡಬಾರದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ನಡೆದ ಸಂತೆಗೆ ಆಗಮಿಸಿದ ರೈತ ಮುಖಂಡರು ನಗರಸಭೆಯಿಂದ ಕೃಷಿ ಉತ್ಪನ್ನಗಳನ್ನು ತರುವವರ ಬಳಿ ಸುಂಕ ವಸೂಲಿ ಮಾಡುವುದನ್ನು ವಿರೋಧಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ಅನ್ವಯ ರೈತನ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಬೆಂಗಳೂರು ಮಹಾನಗರಪಾಲಿಕೆಯವರೂ ಈ ನಿಯಮ ಪಾಲಿಸುತ್ತಿದ್ದಾರೆ. ಅದರಲ್ಲೂ ಪಿಡಬ್ಲೂಡಿಗೆ ಸೇರಿದ ಹಾಗೂ ಕೆರೆಯಂಗಳದ ಜಾಗದಲ್ಲಿ ನಡೆಯುವ ಸಂತೆಯಲ್ಲಿ ನಗರಸಭೆಯಿಂದ ಸುಂಕ ವಸೂಲಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ನೀರಿಲ್ಲದೆ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಸಾವಿರಾರು ಅಡಿಗಳಿಂದ ನೀರನ್ನು ತೆಗೆದು ವ್ಯವಸಾಯ ಮಾಡುತ್ತಿದ್ದು, ಬಿಸಿಲುಗಾಲ ಪ್ರಾರಂಭವಾದ ಮೇಲೆ ವಿದ್ಯುತ್ ಸಹ ಕಣ್ಣು ಮುಚ್ಚಾಲೆ ಆಡುತ್ತಿದೆ. ರಾತ್ರಿ ವೇಳೆ ಬೆಳೆಗಳಿಗೆ ಟ್ಯಾಂಕರ್‌ಗಳಿಂದಲೂ ಸಹ ನೀರು ಖರೀದಿ ಮಾಡಿ ನಮ್ಮ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಸುಂಕ ವಸೂಲು ಮಾಡಬಾರದೆಂದು ನಗರಸಭಾ ಅಧ್ಯಕ್ಷರಿಗೆ, ಕಮೀಷನರ್‌ಗೆ ಸಹ ಮನವಿ ಪತ್ರ ನೀಡಿದ್ದರೂ ಸಹ ಸುಂಕ ವಸೂಲಾತಿ ಮಾಡುತ್ತಿದ್ದು, ರೈತರು ಯಾರೂ ಸುಂಕ ನೀಡಬಾರದೆಂದು ರೈತರಿಗೆ ಮನವಿ ಮಾಡಿದರು.
ರೈತ ಸಂಘ ಮುಖಂಡರ ಒತ್ತಾಯದ ಮೇರೆಗೆ ನಗರಸಭೆಯಲ್ಲಿ ಸಭೆ ಕರೆದು ಚರ್ಚಿಸಿದ್ದು, ಇನ್ನು ಮುಂದೆ ರೈತರು ತರುವ ಯಾವುದೇ ವಸ್ತುಗಳ ಮೇಲೆ ಸುಂಕ ವಸೂಲಾತಿ ಮಾಡಬಾರದೆಂದು ನಗರಸಭೆ ವತಿಯಿಂದ ತೀರ್ಮಾನಿಸಿರುವುದಾಗಿ ಹಸಿರು ಸೇನೆ ರೈತ ಸಂಘದ ಜಿಲ್ಲಾದ್ಯಕ್ಷ ಭಕ್ತರ ಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮಾಜಿ ಎ.ಪಿ.ಎಂ,ಸಿ ಅಧ್ಯ್ಯಕ್ಷ ಹುಜಗೂರು ರಾಮಣ್ಣ , ರೈತ ಮುಖಂಡರಾದ ವೇಣುಗೋಪಾಲ್, ರಾಮಚಂದ್ರಪ್ಪ, ಟಿ.ಕೃಷ್ಣಪ್ಪ, ನಾಗರಾಜ್, ದೇವರಾಜ್, ಏಜಾಜ್‌, ತಮ್ಮಣ್ಣ, ಪುಟ್ಟಮೂರ್ತಿ, ಆನೂರು ನಾಗರಾಜ್‌, ಆನೂರು ದೇವರಾಜ್‌ ಮತ್ತಿತರರು ಹಾಜರಿದ್ದರು.

error: Content is protected !!