ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಬುಧವಾರ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಜಾಗೃತಿ ಕಾರ್ಯಾನುಭವದ ಕೊನೆಯ ದಿನದ ಕೃಷಿ ವಸ್ತು ಪ್ರದರ್ಶನ ಮತ್ತು ರೈತ ತರಬೇತಿ ಕಾರ್ಯಕ್ರಮದಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಡಾ.ಎಂ.ಭೈರೇಗೌಡ ಮಾತನಾಡಿದರು.
‘ರೈತರಿಂದ ಕಲಿಯುವುದು ಮತ್ತು ರೈತರಿಗೆ ಕಲಿಸುವುದು’ ಎಂಬ ಉದ್ದೇಶದಿಂದ ಗ್ರಾಮೀಣ ಜಾಗೃತಿಯ ಕಾರ್ಯಾನುಭವದಲ್ಲಿ ಮೂರು ತಿಂಗಳು ಹಳ್ಳಿಯಲ್ಲಿ ವಾಸಿಸಿದ ವಿದ್ಯಾರ್ಥಿಗಳು ಭಕ್ತರಹಳ್ಳಿಯ ಮನೆಮಕ್ಕಳಾಗಿದ್ದಾರೆ ಎಂದು ಅವರು ತಿಳಿಸಿದರು.
ನಾಲ್ಕು ಗೋಡೆಯ ಮಧ್ಯೆ ಕಲಿಯುವ ಕಲಿಕೆಯ ಜೊತೆಗೆ ರೈತರೊಂದಿಗೆ ಒಡನಾಡಿ ಕಲಿಯುವ ಕಲಿಕೆ ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಮೂಲ ದ್ರವ್ಯ ಒದಗಿಸುತ್ತದೆ. ರೈತರೊಂದಿಗೆ ವಿದ್ಯಾರ್ಥಿಗಳು ಬೆರೆಯಬೇಕು. ಅವರ ಸಮಸ್ಯೆ ಆಲಿಸಬೇಕು. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅಪರಿಚಿತರಾಗಿ ಬಂದಿದ್ದ ವಿದ್ಯಾರ್ಥಿಗಳು ಪರಿಚಿತರಾಗಿ ಹೋಗುವಂತಹ ಈ ಅನುಭವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಗ್ರಾಮದ ಹಿರಿಯರು ರೈತರು ವಿದ್ಯಾರ್ಥಿಗಳಿಗೆ ಸಹಕರಿಸಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ರೈತನ ನೋವಿರುವುದು ಅವನ ಉತ್ಪನ್ನ ಮಾರಾಟವಾಗದಿದ್ದಾಗ. ತಾಂತ್ರಿಕತೆ ಮುಂದುವರೆದಿರುವುದು ರೈತನ ಸಹಾಯಕ್ಕೆ ಬರಲಿ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ರೈತನಿಗೆ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡಿ. ರೈತನ ಉತ್ಪನ್ನ ಬೆಲೆ ಕಳೆದುಕೊಳ್ಳದಂತೆ ಮಾಡಲು ತಾಂತ್ರಿಕ ಪರಿಣಿತರು ಸಹಕರಿಸಲಿ ಎಂದು ಹೇಳಿದರು.
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ, ಸಾಫ್ಟ್‌ವೇರ್, ಮೆಡಿಕಲ್ ಎನ್ನುವ ಈ ಕಾಲದಲ್ಲಿ ಕೃಷಿಯನ್ನು ಓದುತ್ತಿರುವ ವಿದ್ಯಾರ್ಥಿಗಳು ಅಭಿನಂದನೀಯರು. ಸ್ವಂತ ಜಮೀನಿದ್ದರೆ ನೀವು ಎಲ್ಲೂ ಕೆಲಸಕ್ಕೆ ಹೋಗಬೇಡಿ. ಶ್ರದ್ಧೆಯಿದ್ದು ಕೆಟ್ಟ ಚಟಗಳಿರದಿದ್ದಲ್ಲಿ ಕೃಷಿಯೇ ಉತ್ತಮ. ರೇಷ್ಮೆ, ಹಾಲು, ಕುರಿ, ಮೇಕೆ, ಕೋಳಿ, ಜೇನು ಸಾಕಿ, ಉಪಕಸುಬುಗಳನ್ನು ಮಾಡಿದ್ದೇ ಆದರೆ ಯಾವ ಅಧಿಕಾರಿಗೂ ಕಮ್ಮಿಯಿಲ್ಲದಂತೆ ಸಂಪಾದಿಸಬಹುದು ಎಂದು ನುಡಿದರು.
ಸೂರ್ಯಕಾಂತಿ ಹೂ ಬಿರಿದು ಒಂದೆಡೆ ನಳನಳಿಸಿದ್ದರೆ, ಹಸು, ಕುರಿ, ಕೋಳಿ, ಜೇನು ಸಾಕಾಣಿಕೆಯ ಪ್ರದರ್ಶನ ಮತ್ತೊಂದೆಡೆಯಿತ್ತು. ಅಗಸೆ, ಹೆಸರುಕಾಳು, ಎಳ್ಳು, ಹುಚ್ಚೆಳ್ಳು, ರಾಗಿ, ಜೋಳ, ಸಿರಿಧಾನ್ಯಗಳು, ಗೋಡಂಬಿ, ಹುರಳಿ, ಅವರೆ, ತರಕಾರಿ ಬೆಳೆಗಳು, ಮೇವಿನ ಬೆಳೆಗಳು, ನುಗ್ಗೆ ತೋಪು, ತರಕಾರಿ, ಅಲಸಂದಿ ಮುಂತಾದ ಬೆಳೆಗಳನ್ನು ವಿದ್ಯಾರ್ಥಿಗಳೇ ಬೆಳೆದಿದ್ದು ತಳಿ, ಬೆಳೆಯ ಅವಧಿ ಮತ್ತು ಇಳುವರಿಯ ಮಾಹಿತಿಯನ್ನು ಮಾಹಿತಿಗಾಗಿ ಫಲಕಗನ್ನು ಬೆಳೆಯ ಬಳಿ ಲಗತ್ತಿಸಿದ್ದರು. ಬೀಜೋಪಚಾರ, ಎರೆಹುಳು ಗೊಬ್ಬರ ಮತ್ತು ರಸಮೇವಿನ ತಯಾರಿಕೆ, ಕೃಷಿ ಹೊಂಡ, ನೀರನ್ನು ಸದ್ಭಳಕೆ ಮಾಡಿಕೊಳ್ಳುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಸ್‌ಎಫ್‌ಸಿಎಸ್ ಮಾಜಿ ಅಧ್ಯಕ್ಷ ಬಿ.ಆರ್.ರಮೇಶ್, ಎಂಪಿಸಿಎಸ್ ಅಧ್ಯಕ್ಷ ಕೋಟೆ ಚನ್ನೇಗೌಡ, ಕಾಕಚೊಕ್ಕಂಡಹಳ್ಳಿ ನಾರಾಯಣಸ್ವಾಮಿ, ರೈತ ಸಂಘದ ಪ್ರತೀಶ್, ಜಿಕೆವಿಕೆ ಪ್ರಾಧ್ಯಾಪಕರಾದ ಡಾ.ವೈ.ಎನ್.ಶಿವಲಿಂಗಯ್ಯ, ಜಿ.ಎನ್.ನಾಗರಾಜ್, ಡಾ.ಬಿ.ಕೃಷ್ಣಮೂರ್ತಿ, ಡಾ.ಡಿ.ಜಿಮ್ಲಾನಾಯಕ್, ಡಾ.ಭಾನುಪ್ರಕಾಶ್, ಡಾ.ಆನಂದ್, ಸಹಾಯಕ ತೋಟಗಾರಿಕಾ ಅಧಿಕಾರಿ ರವಿಕುಮಾರ್, ಶಿಬಿರದ ವಿದ್ಯಾರ್ಥಿಗಳಾದ ಅಜಿತ್, ಅನಿಲ್, ಅರುಣ್, ಅನೂಷಾ, ಅರ್ಚನಾ, ಬಾಲಗಂಗಾಧರ್, ಅಕ್ಷಯ್, ಅಶ್ವಿನ್, ಅಶ್ವಿನಿ, ಅಪೂರ್ವ, ಬೇಬಿ, ಅನನ್ಯ, ಅರ್ಚಿತ ಹಾಜರಿದ್ದರು.